ಐಷಾರಾಮಿ ಕಾರು ಕಳ್ಳನ ಬಂಧನ

crime
Published on

ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮೈಸೂರಿನ ವಿವಿ ಪುರಂ ಠಾಣಾ ಪೊಲೀಸರು, ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ.

ವೃತ್ತಿನಿರತ ಕಾರು ಕಳ್ಳನಾಗಿರುವ ಈತ ಮನೆಗಳ್ಳತನವನ್ನೂ ಮಾಡಿದ್ದು, ಒಬ್ಬನೇ ದುಷ್ಕೃತ್ಯವೆಸಗುತ್ತಿದ್ದ. ಮೈಸೂರಿನಲ್ಲಿ ಕಳ್ಳತನ ಮಾಡಿದ್ದ ಕಾರುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ವಿ.ವಿ.ಪುರಂ ಹಾಗೂ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಲೆಬಾಳುವ ಅತ್ಯಾಧುನಿಕ ಕಾರುಗಳ ಕಳ್ಳತನವಾಗಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ಈ ಸಂಬಂಧ ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ ಬೇರೆ ಕಡೆಯೂ ಕಾರು ಕಳ್ಳತನ ಮಾಡಿದ್ದಾನೆಯೇ? ಎಲ್ಲೆಲ್ಲಿ ಕಾರು ಕಳವು ಮಾಡಿದ್ದಾನೆ? ಎಲ್ಲೆಲ್ಲಿ ಮನೆ ಕಳ್ಳತನ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ.

ವೃತ್ತಿಪರ ಕಾರು ಕಳ್ಳ ಗುಜರಾತ್, ಮುಂಬೈ, ದೆಹಲಿ ಮತ್ತು ಕೋಲ್ಕತ್ತದಲ್ಲಿ ವ್ಯಾಪಕವಾದ ಗ್ರಾಹಕರ ಜಾಲವನ್ನು ಹೊಂದಿದ್ದ. ಕದ್ದ ಕಾರುಗಳನ್ನು ಜಾಲದಲ್ಲಿನ ಖರೀದಿದಾರರಿಗೆ ಕೂಡಲೇ ಮಾರಾಟ ಮಾಡುತ್ತಿದ್ದ. ಮೈಸೂರಿನಲ್ಲಿ ಕಳವು ಮಾಡಿದ್ದರಲ್ಲಿ ಎರಡು ಕಾರುಗಳನ್ನು ಹೊರ ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡಿದ್ದ. ಪೊಲೀಸರಿಗೂ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರ ವಹಿಸಿದ್ದ. ಟೆಕ್ಕಿಗಳನ್ನೂ ಮೀರಿಸುವಂತಹ ತಾಂತ್ರಿಕ ಪ್ರಾವಿಣ್ಯತೆ ಹಾಗೂ ಕಳ್ಳತನದಲ್ಲಿ ನಿಪುಣನಾಗಿದ್ದ. ಯಾವುದೇ ಕುರುಹುಗಳಿಲ್ಲದ ಕಾರಣದಿಂದ ಪೊಲೀಸರಿಗೂ ತನಿಖೆ ಸವಾಲಾಗಿತ್ತು. ಜಿಪಿಎಸ್ ತಂತ್ರಜ್ಞಾನದ ನೆರವಿನಿಂದಲೇ ಅಂತಿಮವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net