

ಉಡುಪಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನ ಸಮಾನ್ಯರಿಗೆ ತೀವ್ರ ಹೊರೆಯಾಗುತ್ತಿದೆ. ಈ ನಡುವೆ ಫ್ರೆಂಡ್ಸ್ ಎಂಜಿಎಂ ತಂಡವು ಬೆಲೆ ಏರಿಕೆ ವಿರುದ್ದ ವಿಭಿನ್ನ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಗಮನ ಸೆಳೆದಿದೆ. ತಂಡವು ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು, ಇದರ ಅಂಗವಾಗಿ ಲಕ್ಕಿಡಿಪ್‌ನ್ನು ಪ್ರಸ್ತುತಪಡಿಸುತ್ತಿದೆ. ಒಂದು ಲಕ್ಕಿಡಿಪ್ 10 ರೂ, ನಿಗದಿಪಡಿಸಲಾಗಿದೆ.ವಿಜೇತರಿಗೆ ಬಹುಮಾನವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಮುಂದಿನ ತಿಂಗಳು ಏಪ್ರಿಲ್.3 ರಂದು ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ತಂಡಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಲಕ್ಕಿಡಿಪ್‌ನ ಅದೃಷ್ಟವಂತರಿಗೆ ಪ್ರಥಮ ಬಹುಮಾನವಾಗಿ 10 ಲೀಟರ್ ಪೆಟ್ರೋಲ್, ದ್ವಿತೀಯ ಬಹುಮಾನವಾಗಿ 5 ಲೀಟರ್ ಡೀಸೆಲ್ ಮತ್ತು ತೃತೀಯ ಬಹುಮಾನ 3ಲೀಟರ್ ಗ್ಯಾಸ್(ವಾಹನ) ನೀಡಲಾಗುತ್ತದೆ. ಏಪ್ರಿಲ್.4 ರಂದು ಡ್ರಾ ನಡೆಯಲಿದೆ ಎಂದು ತಂಡದ ಆಯೋಜಕರು ವಿಜಯವಾಣಿಗೆ ತಿಳಿಸಿದ್ದಾರೆ.