

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರ ಮಹಿಳಾ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯವಾಣಿಯ ‘ನಾರಿ ನಿನಗೊಂದು ಸ್ಯಾರಿ’ ಲಕ್ಕಿಡಿಪ್‌ನಲ್ಲಿ ತಾಲೂಕಿನ ಐವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಸಮಾಜ ಅಧ್ಯಕ್ಷೆ ವತ್ಸಲಾ, ವಿಜಯವಾಣಿ ದಿನಪತ್ರಿಕೆಯ ವಿನೂತನ ಕಾಯಕ್ರಮ ಮಹಿಳೆಯರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ಜತೆಗೆ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿನ ವಿದ್ಯಮಾನಗಳ ಬಗ್ಗೆ ಅರಿವು ಹೊಂದುವ ಸಲುವಾಗಿ ಮಹಿಳೆಯರು ಪತ್ರಿಕೆ ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಮೀಸಲಾತಿ ಅನುಮೋದನೆ ಮಾಡಿದೆ, ಇಂಥ ವಿಷಯಗಳು ಪತ್ರಿಕೆಗಳಿಂದ ತಿಳಿಯಲು ಸಾಧ್ಯ ಎಂದರು.
ಈಗಾಗಲೇ ಸ್ಥಳೀಯ ಆಡಳಿತದಲ್ಲಿ ಮಹಿಳಾ ಮೀಸಲಾತಿ ಜಾರಿಯಲ್ಲಿದ್ದರೂ ಮಹಿಳೆಯರ ಹೆಸರಿನಲ್ಲಿ ಪುರುಷರೇ ದರ್ಬಾರ್ ಮಾಡುತ್ತಿದ್ದಾರೆ. ಇಂತಹ ವ್ಯವಸ್ಥೆ ತೊಲಗಿಸಲು ಮಹಿಳೆಯರು ಸಶಕ್ತರಾಗಬೇಕು ಎಂದರು.
ಸೀರೆ ಸಂಸ್ಕೃತಿಯ ಭಾಗ: ಸೀರೆ ಎಂಬುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಸಂಘದ ಕಾರ್ಯದರ್ಶಿ ಸರೋಜಮ್ಮ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸೀರೆ ಎಂದರೆ ಮೂಗು ಮುರಿಯುವ ಮಹಿಳೆಯರೇ ಹೆಚ್ಚಾಗಿದ್ದಾರೆ. ಸೀರೆ ಮಹಿಳೆಯ ರಕ್ಷಣಾ ಧ್ಯೋತಕವೂ ಆಗಿದೆ. ವಿಜಯವಾಣಿ ದಿನಪತ್ರಿಕೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಹಿಳಾ ಓದುಗರನ್ನು ತಲುಪಿ, ಸಾಮಾಜಿಕ ಪ್ರಜ್ಞೆ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು. ದಿನಪತ್ರಿಕೆ ತರಿಸದ ಮನೆಗಳೇ ಇರುತ್ತಿರಲಿಲ್ಲ:
ಈ ಹಿಂದೆ ಅನೇಕ ಕುಟುಂಬಗಳಲ್ಲಿ ದಿನಪತ್ರಿಕೆ ಓದುವ ವಿಚಾರಕ್ಕೆ ರಂಪ-ರಗಳೆಗಳಾಗುತ್ತಿದ್ದವು ಎಂದು ಸಂಘದ ನಿರ್ದೇಶಕಿ ಕವಿತಾ ನೆನಪು ಮಾಡಿಕೊಂಡರು. ಪ್ರತಿ ಪುಟವನ್ನು ನಾ ಮೊದಲು ತಾ ಮೊದಲು ಎಂದು ಕಿತ್ತಾಡಿಕೊಂಡು ಓದುತ್ತಿದ್ದರು. ಈ ಹಿಂದೆ ದಿನಪತ್ರಿಕೆ ತರಿಸದ ಮನೆಗಳೇ ಇರುತ್ತಿರಲಿಲ್ಲ. ದಿನಪತ್ರಿಕೆ ಎನ್ನುವುದು ಕುಟುಂಬಗಳ ಅವಿಭಾಜ್ಯ ಅಂಗವಾಗಿತ್ತು ಎಂದರು.