

ಮೈಸೂರು: ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟವನ್ನು ಇನ್ನಷ್ಟು ಸುಧಾರಿಸುವತ್ತ ಶಿಕ್ಷಕರು ಕಾರ್ಯ ನಿರ್ವಹಿಸುವ ಮೂಲಕ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ.ಪಾಂಡು ಶಿಕ್ಷಕರಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೈಸೂರು ತಾಲೂಕು ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ‘ಗುರುಸ್ಪಂದನಾ’ ಕಾರ್ಯಕ್ರಮದಲ್ಲಿ ಶಿಕ್ಷಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿದೆ. ಹಾಗಾಗಿ ಇಲ್ಲಿ ಬಹು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಸರ್ಕಾರ ಸವಲತ್ತು ನೀಡುತ್ತಿದ್ದು, ಅದನ್ನು ಸರಿಯಾಗಿ ಬಳಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಾಲೇಗೌಡ ಮಾತನಾಡಿ, ಮೈಸೂರು ಗ್ರಾಮಾಂತರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಈ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾವಿರಕ್ಕೂ ಹೆಚ್ಚು ಶಿಕ್ಷಕರು ಇರುವುದರಿಂದ ಕ್ಲಸ್ಟರ್‌ಗೆ ಅನುಗುಣವಾಗಿ ಮೂರು ಹಂತದಲ್ಲಿ ಗುರುಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ಮುಂದೆ ಡಿ.30 ಹಾಗೂ ಜನವರಿ 6ರಂದು ಗುರು ಸ್ಪಂದನಾ ಕಾರ್ಯಕ್ರಮ ಎಂದು ತಿಳಿಸಿದರು.
ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿವೇಕಾನಂದ, ಸಂಘದ ತಾಲೂಕು ಅಧ್ಯಕ್ಷ ಎಸ್.ರಘು, ಉಪಾಧ್ಯಕ್ಷರಾದ ಸಿ.ಎಸ್.ಮಮತಾ, ಎಚ್.ಎ.ಸುಮತಿ, ಶಿವಪ್ಪ, ಖಜಾಂಚಿ ವೆಂಕಟೇಶ್, ಗೌರವಾಧ್ಯಕ್ಷ ಜೆ.ಬಿ.ಸತೀಶ್, ಪದಾಧಿಕಾರಿಗಳಾದ ಮಹದೇವ, ಅಶೋಕ್ ಸುರೇಶ್, ಅನಿಲ್‌ಕುಮಾರ್, ಶಾಮಲಾ, ಮಹೇಶ್, ವ್ಯವಸ್ಥಾಪಕ ವಿಶ್ವನಾಥ್ ಇತರರು ಇದ್ದರು.
ಬಡ್ತಿ, ವೇತನ ತಾರತಮ್ಯ, ರಜೆ, ಕೋವಿಡ್ ಸಮಯದಲ್ಲಿನ ಕೆಲ ತಾಂತ್ರಿಕ ತೊಡಕುಗಳು, ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ದಾಖಲಿಸುವಲ್ಲಿ ಆಗಿರುವ ತೊಂದರೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಶಿಕ್ಷಕರು ಅಹವಾಲು ಸಲ್ಲಿಸಿದರು.