ಎಲ್ ಆಂಡ್ ಟಿ ಅಧಿಕಾರಿಗಳು ತರಾಟೆಗೆ

New L & T New
Published on

ಹುಬ್ಬಳ್ಳಿ : ನೀರು ಸೋರಿಕೆ ತಡೆಗಟ್ಟಲು ಸಿಮೆಂಟ್ ರಸ್ತೆಗಳನ್ನು ಪದೇ ಪದೆ ಅಗೆಯುತ್ತಿರುವ ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ತರಾಟೆ ತೆಗೆದುಕೊಂಡರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಹಾನಗರ ಪಾಲಿಕೆ, ಎಲ್ ಆಂಡ್ ಟಿ ಕಂಪನಿ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಸಿಮೆಂಟ್ ರಸ್ತೆ ನಿರ್ಮಾಣ ಮಾಡುವ ಮುಂಚೆಯೇ ಅಗತ್ಯ ಸೌಲಭ್ಯಗಳನ್ನು ಸ್ಥಳಾಂತರಿಸುವಂತೆ ಕಾಲಾವಕಾಶ ನೀಡಲಾಗುತ್ತದೆ. ಆದರೂ, ಕೆಲ ಇಲಾಖೆಗಳು ನಿರ್ಲಕ್ಷ ತೋರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಮೆಂಟ್ ರಸ್ತೆ ನಿರ್ವಿುಸುವ ಮುಂಚೆಯೇ ಪ್ರತಿ ಮನೆಗೆ ನೀರಿನ ಸಂಪರ್ಕ ಕೊಡಬೇಕಾಗಿತ್ತು. ಇದೀಗ ಎಲ್ ಆಂಡ್ ಟಿದವರು ಪದೇ ಪದೆ ಅಗೆಯುತ್ತಿರುವುದರಿಂದ ರಸ್ತೆಗಳು ಹಾಳಾಗಿ ಹೋಗುತ್ತಿವೆ ಎಂದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಎಲ್ ಆಂಡ್ ಟಿ ಕಂಪನಿಯವರು ಈಗಾಗಲೇ ಅಗೆದಿರುವ ರಸ್ತೆಗಳನ್ನು ದುರಸ್ತಿ ಮಾಡಿಕೊಡುವಂತೆ ಹೇಳಿದರು.

ಉಣಕಲ್​ನಿಂದ ಸಾಯಿನಗರವರೆಗಿನ ಮೂರು ಕಿಮೀ ವರೆಗಿನ ರಸ್ತೆ ಪೂರ್ಣಗೊಂಡಿದೆ. ಮಧ್ಯದಲ್ಲಿ ಬರುವ 300 ಮೀ. ರಸ್ತೆಗೆ ಸಾರ್ವಜನಿಕರ 29 ಮನೆ ಹಾಗೂ ಖುಲ್ಲಾ ಆಸ್ತಿಗಳನ್ನು ವಶಪಡಿಸಿಕೊಂಡು, ರಸ್ತೆ ಮಾಡಬೇಕಿದೆ. ಇದಕ್ಕಾಗಿ 3 ಕೋಟಿ ರೂ. ಪರಿಹಾರ ನೀಡಬೇಕಿದೆ. ಸರ್ಕಾರದಿಂದ 10 ಕೋಟಿ ರೂ. ಅನುದಾನದ ಬಂದಿದ್ದು, ಈಗಾಗಲೇ 109 ಭೂಮಿಯನ್ನು ಪರಭಾರೆ ಮಾಡಿಕೊಳ್ಳಲಾಗಿದೆ. ಬಾಕಿ ಉಳಿದಿರುವ 29 ಆಸ್ತಿಗಳ ಮಾಲೀಕರಿಗೆ ಅವರ ಪಾಲಿಗೆ ಬರುವ ಹಣವನ್ನು ಸಂದಾಯ ಮಾಡಿ, ಪಾಲಿಕೆಯು ಶೀಘ್ರ ಭೂಮಿ ಹಸ್ತಾಂತರಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕು ಎಂದರು.

ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ರವಿ ನಾಯಕ, ಶಿವು ಪಾಟೀಲ, ಪಾಲಿಕೆ, ಹೆಸ್ಕಾಂ ಹಾಗೂ ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net