

ಕಾರವಾರ: ಮೋದಿ ಅಲೆಯಲ್ಲಿ ಗೆಲ್ಲಬಹುದು ಎಂದು ಕನಸು ಕಂಡಿದ್ದ ಉತ್ತರ ಕನ್ನಡ ಬಿಜೆಪಿಗೆ ಮತದಾರ ಬಿಗ್ ಶಾಕ್ ನೀಡಿದ್ದಾನೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಜನ ಫಿದಾ ಆಗಿದ್ದು, ಜಿಲ್ಲೆಯ 6 ರಲ್ಲಿ ನಾಲ್ಕು ಕ್ಷೇತ್ರ ಕೈ ಪಾಲಾಗಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರೆ, ಜೆಡಿಎಸ್ ಹಿಂದಿನಂತೆ ಶೂನ್ಯ ಸಾಧನೆ ಮಾಡಿದೆ.
ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ನಂತರ 2018 ರಲ್ಲಿ ನಡೆದ ಹಿಂದುಪರ ಹೋರಾಟಗಳ ಲಾಭವನ್ನು ಬಿಜೆಪಿ ಪಡೆದಿತ್ತು. ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ 6 ರಲ್ಲಿ 4 ಸ್ಥಾನಗಳನ್ನು ಭಾರೀ ಅಂತರಗಳಿಂದ ಗೆದ್ದಿತ್ತು. 2019 ರಲ್ಲಿ ಶಿವರಾಮ ಹೆಬ್ಬಾರ ಬಿಜೆಪಿ ಸೇರುವ ಮೂಲಕ ಜಿಲ್ಲೆಯ ಕಮಲ ಪಡೆಯ ಬಲ ಐದಕ್ಕೇರಿತ್ತು.
2019 ರ ಎಂಪಿ ಚುನಾವಣೆ, 2021 ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಗೆಲ್ಲುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿತ್ತು. ಹೀಗೆ ನಿರಂತರ ಗೆಲುವಿನಿಂದ ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಅತಿಯಾದ ಆತ್ಮವಿಶ್ವಾಸ ಮುಳುವಾಗಿದೆ. ತಾವು ಹೇಳಿದ್ದನ್ನೆಲ್ಲ, ಹೇರಿದ್ದನ್ನೆಲ್ಲ ಜನ ನಂಬುತ್ತಾರೆ ಎಂಬ ಬಿಜೆಪಿಗರ ಭಾವನೆ ಹುಸಿಯಾಗಿದೆ.
ಮತ್ತೊಮ್ಮೆ ಮೋದಿ ಅಲೆ, ಹಿಂದುತ್ವದ ಸೆಲೆಯಲ್ಲೇ ಗೆಲುವು ಸಾಧಿಸಬಹುದು ಎಂಬ ಪಕ್ಷದ ಪ್ರಮುಖರ ಲೆಕ್ಕಾಚಾರ ತಲೆಕೆಳಗಾಗಿದೆ. ಪರಿಣಾಮ ಈ ಬಾರಿ ಮೂರು ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ ಕಮಲ ಪಕ್ಷ ಭಾರಿ ಮುಖಭಂಗ ಅನುಭವಿಸಿದೆ.
ಬಿಜೆಪಿಗೆ ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅಲೆಯೆಬ್ಬಿಸಬಹುದಾದ ಯಾವುದೇ ಇಶ್ಯೂ ಸಿಕ್ಕಿರಲಿಲ್ಲ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಮಾಡಿದ ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಮತ ಬೇಟೆಗೆ ಮುಂದಾಗಿದ್ದ ಕಮಲ ಪಕ್ಷಕ್ಕೆ ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪಗಳು, ಬೆಲೆ ಏರಿಕೆಯಂಥ ಜನಸಾಮಾನ್ಯರ ವಿಷಯಗಳು ಸವಾಲಾಗಿದ್ದವು.
ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಅಸಮಾಧಾನಗಳಿದ್ದವು. ಆದರೆ, ಮೋದಿ ಅಲೆಯಿಂದ ಅವನ್ನೆಲ್ಲ ಮಣಿಸಬಹುದು ಎಂಬ ನಂಬಿಕೆ ಹುಸಿಯಾಗಿದೆ.
ಎರಡು ವರ್ಷ ಕರೋನಾ ಕಂಟಕ, ನೆರೆ ನರಕಗಳಿಂದ ಬಳಲಿ ಬೆಂಡಾಗಿದ್ದ ಜನ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದರು. ಸರ್ಕಾರದಿಂದ ಸ್ಪಂದನೆ ದೊರೆಯದ ಬಗ್ಗೆ ದೂರುತ್ತಿದ್ದರು.
ಆದರೆ, ಸ್ಥಳೀಯ ವಿಷಯಗಳ ಚರ್ಚೆ ಬಿಟ್ಟು ರಾಷ್ಟ್ರೀಯ ವಿಚಾರಧಾರೆಯನ್ನಿಟ್ಟು ಚುನಾವಣೆ ಎದುರಿಸಿದ ಬಿಜೆಪಿಯ ಅಜೆಂಡಾವೇ ಸಾಮಾನ್ಯ ಜನರ ಮನಸ್ಸಿಗೊಪ್ಪಿಲ್ಲ.
ಕಾರ್ಯಕರ್ತರ ಕಡೆಗಣನೆ: ಪಕ್ಷಕ್ಕಾಗಿ ದುಡಿದವರನ್ನು ಬಿಟ್ಟು, ಬೇರೆ ಪಕ್ಷಗಳಿಂದ ಬಂದ ವಲಸಿಗರಿಗೆ ಟಿಕೆಟ್ ನೀಡಿ 2018 ರ ಹಿಂದುತ್ವದ ಅಲೆಯಲ್ಲಿ ಸುಲಭದ ಗೆಲುವು ಸಾಧಿಸಿತ್ತು. ಆದರೆ, ವಲಸಿಗರು ಬಿಜೆಪಿಯ ಜತೆ ಸೇರಲೇ ಇಲ್ಲ.
ತಮ್ಮದೇ ಟೋಳಿ ಕಟ್ಟಿಕೊಂಡು, ಮೂಲ ಬಿಜೆಪಿಗರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಆರೋಪ ಭಟ್ಕಳ, ಯಲ್ಲಾಪುರ, ಕುಮಟಾ, ಕಾರವಾರ ಕ್ಷೇತ್ರಗಳಲ್ಲಿ ಕೇಳಿಬಂದಿತ್ತು. ಯಾವುದೇ ಲಾಪೇಕ್ಷೆ ಇಲ್ಲದೆ ನಿಸ್ಪ್ರಹರಾಗಿ ದುಡಿಯುತ್ತಿರುವ ಕಾರ್ಯಕರ್ತರ ನಿಲುವುಗಳಿಗೆ ಸ್ಪಂದನೆ ದೊರೆಯುತ್ತಿಲ್ಲ.
ಗುತ್ತಿಗೆದಾರರ, ಭ್ರಷ್ಟಾಚಾರಿಗಳ ಮಾತನ್ನು ಶಾಸಕರು ಕೇಳುತ್ತಿದ್ದಾರೆ ಎಂಬ ದೂರಿತ್ತು. ಪಕ್ಷದ ಹೈಕಮಾಂಡ್‌ವರೆಗೂ ಈ ಬಗ್ಗೆ ದೂರು ಹೋಗಿತ್ತು.
ಆದರೆ, ಕಾರ್ಯಕರ್ತರ ಅಳಲಿಗೆ ಧ್ವನಿಯಾಗಬೇಕಾಗಿದ್ದ ಪಕ್ಷದ ವರಿಷ್ಠರು, ಅದನ್ನೆಲ್ಲ ಕಡೆಗಣಿಸಿ, ತಮ್ಮದೇ ಯೋಚನೆಗಳನ್ನು ಹೇರಲು ಹೊರಟಿದ್ದರು. ಇದರಿಂದ ಬೇಸರಗೊಂಡ ಹಲವು ಮುಖಂಡರು ಬೇರೆ ಪಕ್ಷ ಸೇರಿದ್ದೂ ಆಗಿತ್ತು.
ಇನ್ನು ಹಿಂದುತ್ವ ಬಿಟ್ಟಿರಲಾರದ ಹಲವು ಕಾರ್ಯಕರ್ತರು ಇದರಿಂದ ಹಲವರು ಸಿಡಿದು ಬೇರೆ ಪಕ್ಷ ಸೇರಿದ್ದೂ ಆಗಿತ್ತು. ಈ ಅಸಮಾಧಾನವನ್ನು ಆಲಿಸುವ, ಸರಿ ಮಾಡಲು ಕ್ರಮ ವಹಿಸುವ ಬದಲು ಪಕ್ಷದ ಹೈಕಮಾಂಡ್ ಕಾರ್ಯಕರ್ತರ ಮೇಲೆ ತನ್ನ ನಿಲುವನ್ನು ಹೇರಲು ಮುಂದಾಗಿದ್ದು, ಹಲವರ ಸಿಟ್ಟಿಗೆ ಕಾರಣವಾಗಿತ್ತು.
ಇದರಿಂದ ಹಲವೆಡೆ ಬಿಜೆಪಿ ಮೂಲ ಕಾರ್ಯಕರ್ತರು ತಟಸ್ಥರಾಗಿದ್ದು, ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಿದೆ