

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಲವು ಕಡೆಗಳಲ್ಲಿ ರಸ್ತೆ, ಗಟಾರು, ಚರಂಡಿ ಕಾಮಗಾರಿಗಳು ಕಳಪೆಯಾಗಿದ್ದು, ಇಲ್ಲಿನ ಶಾಸಕರು ಯಾವುದನ್ನೂ ಗಮನಿಸುತ್ತಿಲ್ಲ ಎಂದು ಶ್ರೀ ಸಹಸ್ರಾರ್ಜುನ ಎಸ್ಎಸ್ ಕೆ ಸಮಾಜದ ಯುವಕರ ಸಂಘದ ಜಿಲ್ಲಾಧ್ಯಕ್ಷ ರಾಜು ನಾಯಕವಾಡಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಆರ್ ಟಿ ನಗರ, ವೆಂಕಟೇಶ್ವರ ಕಾಲನಿ, ಸಿದ್ದಲಿಂಗೇಶ್ವರ ಕಾಲನಿ, ವಿಕಾಸನಗರ, ನಂದಿನಿನಗರ, ಆರ್.ಎನ್. ಶೆಟ್ಟಿ ಫ್ಯಾಕ್ಟರಿ ರಸ್ತೆ, ಹೆಗ್ಗೇರಿ ಸೇರಿ ಹಲವು ಕಡೆಗಳಲ್ಲಿ ಕಳಪೆ ಕಾಮಗಾರಿ ಕಂಡು ಬಂದಿದೆ. ಜನರ ಸಮಸ್ಯೆ ಕೇಳಲು ಶಾಸಕರಿಗೆ ಸಮಯ ಇಲ್ಲ ಎಂದು ದೂರಿದರು.
ಕ್ಷೇತ್ರದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೇಳಬೇಕಾದ ಶಾಸಕ ಮಹೇಶ ಟೆಂಗಿನಕಾಯಿ ಅವರು ನಾಮಕಾವಾಸ್ತೆ ಸಭೆ ನಡೆಸುತ್ತಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡುತ್ತಿಲ್ಲ. ಕ್ಷೇತ್ರಕ್ಕೆ ಬಂದಿರುವ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಆದರೆ, ಬಿಲ್ ಮಾತ್ರ ಪೇಮೆಂಟ್ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸಿ ಉತ್ತಮ ಕಾಮಗಾರಿ ಕೈಗೊಳ್ಳಬೇಕು. 15 ದಿನದಲ್ಲಿ ಸಾರ್ವಜನಿಕರಿಗೆ ಉತ್ತಮ ರಸ್ತೆ, ಕಾಮಗಾರಿಯ ಭರವಸೆ ನೀಡದಿದ್ದರೆ ಮಹಾನಗರ ಪಾಲಿಕೆ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಆನಂದ ದಲಬಂಜನ, ಜಿಲ್ಲಾ ಉಪಾಧ್ಯಕ್ಷ ರಾಜು ಮಾಮರಡಿ ಗೋಷ್ಠಿಯಲ್ಲಿದ್ದರು.