

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಮೂಲಕ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ತಗ್ಗು-ಗುಂಡಿಗಳಿಂದ ತುಂಬಿಕೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ.
ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಸಮಸ್ಯೆ ಒಂದೆಡೆಯಾದರೆ, ಆಗಾಗ ತಗ್ಗುಗುಂಡಿಗಳನ್ನು ದುರಸ್ತಿ ಮಾಡದಿರುವುದು, ಮಾಡಿದರೂ ಕಾಟಾಚಾರಕ್ಕೆ ಎಂಬಂತೆ ಕಲ್ಲಿನ ಪುಡಿ ಹಾಕಿ ಇಂಜಿನಿಯರ್‌ಗಳು ಕೈತೊಳೆದುಕೊಂಡು ಬಿಡುತ್ತಾರೆ. ಆದರೆ, ಇಲ್ಲಿನ ಪಾದಚಾರಿಗಳು, ಶಾಲಾ ಮಕ್ಕಳು, ಬೈಕ್ ಸವಾರರು ನಿತ್ಯವೂ ಧೂಳಿನ ಸಲುವಾಗಿ ಮಾಸ್ಕ್ ಧರಿಸಬೇಕು. ಮಾರುಕಟ್ಟೆಗೆ ಬರುವ ಬೃಹತ್ ಲಾರಿ, ಬಸ್, ಟಾಟಾ ಏಸಿಯಂತಹ ವಾಹನಗಳು ಹೋಗುತ್ತಿದ್ದಂತೆ ಕೆಲಹೊತ್ತಿನವರೆಗೆ ರಸ್ತೆ ತುಂಬೆಲ್ಲ ಧೂಳು ಆವರಿಸಿಕೊಂಡು ಜನರು ಓಡಾಡಲು ಸಂಕಟಪಡಬೇಕಿದೆ.
ಲೋಕೋಪಯೋಗಿ ಇಂಜಿನಿಯರ್ ನಿರ್ಲಕ್ಷ್ಯದಿಂದ ನಿತ್ಯವೂ ಸ್ಥಳೀಯ ಸಾರ್ವಜನಿಕರು ನರಕಯಾತನೆ ಅನುಭವಿಸಬೇಕಿದೆ. ರಸ್ತೆ ಗುಂಡಿ ಮುಚ್ಚಲು ಕ್ರಷರ್‌ಗಳ ಕಲ್ಲಿನ ಪುಡಿ ತಂದು ಹಾಕಿದ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಎಡಬಲಗಳಲ್ಲಿರುವ ಫುಟ್‌ಪಾತ್ ವ್ಯಾಪಾರಿಗಳ ಗೋಳು ದೇವರೇ ಬಲ್ಲ, ಹಣ್ಣು, ಎಲೆ, ಹೂವು, ಸಣ್ಣ ಪುಟ್ಟ ಆಹಾರ ಪದಾರ್ಥಗಳ ಮೇಲೆ ಧೂಳು ಆವರಿಸಿಕೊಂಡಿರುತ್ತದೆ. ಈ ಕುರಿತು ಅಧಿಕಾರಿಗಳಿಗೆ ಕೇಳಿದರೆ, ಏನೂ ಮಾಡುವುದಕ್ಕೆ ಆಗುವುದಿಲ್ಲ. ರಸ್ತೆ ಸಮಸ್ಯೆಯಿದೆ ಎನ್ನುವ ಹಾರಿಕೆ ಉತ್ತರ ಹೇಳುತ್ತಾರೆ. ಆದರೆ, ರಸ್ತೆ ಸಮಸ್ಯೆ ನ್ಯಾಯಾಲಯದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ದುರಸ್ತಿ ಮಾಡಲು ಯಾವ ತಕರಾರು ಇಲ್ಲ, ಅಧಿಕಾರಿಗಳು ಇದನ್ನೇ ನೆಪಮಾಡಿಕೊಂಡು ಸಾರ್ವಜನಿಕರಿಗೆ ಧೂಳಿನ ಮಜ್ಜನ ಮಾಡಿಸುತ್ತಿದ್ದಾರೆ.
ಮುಖ್ಯ ರಸ್ತೆ ವಿಸ್ತರಣೆ ವಿಳಂಭ ಮಾಡುವ ಮೂಲಕ ಲೋಕೋಪಯೋಗಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. 10-15 ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಖ್ಯಾತಿಯ ಪಟ್ಟಣಕ್ಕೆ ರಸ್ತೆ ಪರಿಸ್ಥಿತಿ ಕಪ್ಪು ಚುಕ್ಕೆಯಂತಾಗಿದೆ. ಸಾರ್ವಜನಿಕರು ಗುಂಡಿ ದುರಸ್ತಿಗೆ ಒತ್ತಾಯಿಸಿದರೆ, ಕಲ್ಲಿನ ಪುಡಿ ಹಾಕಿ ಪಟ್ಟಣದ ವಾತಾವರಣ ಕೆಡಿಸಿದ್ದಾರೆ. ಕೂಡಲೇ ಸಂಬಂಧಿಸಿದವರು ಈ ಅವಸ್ಥೆ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.I ಶಿವಯೋಗಿ ಗಡಾದ, ರೈತ