

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ದಪ್ಪರ್ತಿಯಲ್ಲಿ ಮಗಳ ಜತೆ ಪರಾರಿಯಾದ ಯುವಕನ ಕುಟುಂಬಸ್ಥರ ಮೇಲೆ ಯುವತಿಯ ಗುಂಪಿನವರು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆಗೈದಿದ್ದಾರೆ.
ಗ್ರಾಮದ ಗಂಗರಾಜು ಮತ್ತು ವೆಂಕಟಲಕ್ಷö್ಮಮ್ಮ ದಂಪತಿ ಗಾಯಾಳುಗಳು. ಯುವತಿಯ ಕುಟುಂಬಸ್ಥರಾದ ಶ್ರೀನಿವಾಸ್ ಸೇರಿದಂತೆ ಹಲವರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಬೆಳಗಾವಿಯಲ್ಲಿ ಪ್ರೇಮಿಗಳ ಪರಾರಿ ಹಿನ್ನೆಲೆಯಲ್ಲಿ ನಡೆದ ಅಮಾನವೀಯ ಹಲ್ಲೆ ಪ್ರಕರಣವು ಮಾಸುವ ಮುನ್ನವೇ ಗುಡಿಬಂಡೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
* ಪ್ರಕರಣದ ಹಿನ್ನೆಲೆ
ದಪ್ಪರ್ತಿಯಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿರುವ ಮನೋಜ್ ಮತ್ತು ಅಂಕಿತ ಪ್ರೇಮಿಗಳು ಕಳೆದ ಹಲವು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ, ಮದುವೆಯಾಗಲು ಪರಾರಿಯಾಗಿದ್ದರು. ಬಳಿಕ ಪಾಲಕರ ಮನವೊಲಿಕೆಯಿಂದ ಗ್ರಾಮಕ್ಕೆ ಬಂದು ಪ್ರತ್ಯೇಕವಾಗಿ ನೆಲೆಸಿದ್ದರು. ಇದರ ನಡುವೆ ಮತ್ತೆ ಪರಾರಿಯಾಗಿದ್ದಾರೆ. ಇದು ಯುವತಿಯ ಪಾಲಕರನ್ನು ಕೆರಳಿಸಿದ್ದು ಯುವಕನ ತಂದೆ ತಾಯಿಯ ಮೇಲೆ ನಡುರಸ್ತೆಯಲ್ಲಿಯೇ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.
* ಮೊದಲೇ ನ್ಯಾಯ ಪಂಚಾಯಿತಿ
ಈ ಹಿಂದೆ ಪರಾರಿಯಾಗಿದ್ದ ಪ್ರೇಮಿಗಳನ್ನು ಕರೆಸಿಕೊಂಡು ಎರಡೂ ಕಡೆಯ ಕುಟುಂಬಸ್ಥರು ನ್ಯಾಯ ಪಂಚಾಯಿತಿ ಮಾಡಿದ್ದರು. ಇದೇ ವೇಳೆ ಯುವಕನಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ. ಇದಕ್ಕೆ ಈಗ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ. ಅವರವರ ಮನೆಗೆ ಅವರವರು ಹೋಗಲಿ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ನಡುವೆ ಸೋಮವಾರಕ್ಕೆ ಯುವಕನಿಗೆ ೨೧ ವರ್ಷ ತುಂಬಿದೆ. ಇದರಿಂದ ಈಗ ವಿವಾಹವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಪ್ರೇಯಸಿಯೊಂದಿಗೆ ಆತ ಪರಾರಿಯಾಗಿದ್ದಾನೆ.
* ಆಂಬ್ಯುಲೆನ್ಸ್ ತಡೆದ ಹಲ್ಲೆಕೋರರು
ಪ್ರೇಮಿಗಳು ಪರಾರಿಯಾದ ಮಾಹಿತಿ ತಿಳಿಯುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದರ ಜತೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರಿಗೆ ಬಿಟ್ಟಿಲ್ಲ. ನೆರವಿಗೆ ಬಂದರೆ ಗ್ರಹಚಾರ ನೆಟ್ಟಿಗಿರುವುದಿಲ್ಲ ಎಂಬುದಾಗಿ ದೊಣ್ಣೆಗಳನ್ನು ತೋರಿಸಿ ಬೆದರಿಸಿದ್ದಾರೆ. ಇದರ ನಡುವೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಆಂಬ್ಯುಲೆನ್ಸ್ಗೆ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ. ತಾಸುಗಟ್ಟಲೇ ತಡೆದು, ಆಕ್ರೋಶ ವ್ಯಕ್ತಪಡಿಸಿದೆ. ಕೊನೆಗೆ ಪೊಲೀಸರು ಆಗಮಿಸುತ್ತಿದ್ದಂತೆ ಪರಾರಿಯಾಗಿದೆ.
* ಒಂದೇ ಸಮುದಾಯ
ಪ್ರೇಮಿಗಳು ಒಂದೇ ಸಮುದಾಯಕ್ಕೆ ಸೇರಿದ್ದಾರೆ. ಇದರ ನಡುವೆ ನಾಯಕ ಜನಾಂಗದ ಉಪ ಜಾತಿಯಲ್ಲಿ ಮೇಲು ಕೀಳಿನ ಲೆಕ್ಕಾಚಾರದಲ್ಲಿ ಯುವಕನಿಗೆ ಮದುವೆ ಮಾಡಿಕೊಡಲು ಯುವತಿಯ ಕುಟುಂಬಸ್ಥರು ಒಪ್ಪುತ್ತಿರಲಿಲ್ಲ. ಪ್ರೀತಿಯ ವಿಚಾರ ತಿಳಿದಾಗಿನಿಂದಲೂ ಕೆಂಡಕಾರುತ್ತಿದ್ದರು. ಇದರ ನಡುವೆ ಪಟ್ಟು ಬಿಡದ ಮನೋಜ್ ೨೧ ವರ್ಷವಾಗುತ್ತಿದ್ದಂತೆ ಪ್ರೇಯಸಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದಕ್ಕೆ ಕುಟುಂಬಸ್ಥರ ಬೆಂಬಲವಿದೆ ಎಂಬ ಆಕ್ರೋಶದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ.
* ಬಿಗುವಿನ ವಾತಾವರಣ
ಪ್ರೇಮಿಗಳ ಪರಾರಿ, ಎರಡು ಕುಟುಂಬಗಳ ನಡುವಿನ ಮಾರಾಮರಿ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.