ದಸಂಸ ನೇತೃತ್ವದಲ್ಲಿ ಒಂದಾದ ಪ್ರೇಮಿಗಳು

5-kollegal-6,,,,
ಕೊಳ್ಳೇಗಾಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಪ್ರೇಮಿಗಳಾದ ಕುಮಾರಿ ಮತ್ತು ಕೀರ್ತಿ ಪರಸ್ಪರ ಹಾರ ಬದಲಾಯಿಸಿಕೊಂಡರು. ದೊಡ್ಡಿಂದುವಾಡಿ ಸಿದ್ದರಾಜು, ದೊಡ್ಡಯ್ಯ ಇತರರು ಇದ್ದರು.
Published on

ಕೊಳ್ಳೇಗಾಲ: ಮನೆಯವರ ವಿರೋಧದ ನಡುವೆ ಪ್ರೇಮಿಗಳು ಪ್ರೀತಿಸಿ ಒಂದಾಗಬೇಕೆಂದು ಠಾಣೆ ಮೆಟ್ಟಲೇರಿದ ಪ್ರಕರಣ ದಲಿತ ಸಂಘರ್ಷ ಸಮಿತಿ ಮುಖಂಡರ ನೇತೃತ್ವದಲ್ಲಿ ಗುರುವಾರ ಸುಖಾಂತ್ಯಗೊಂಡಿದೆ.

ಕೊಳ್ಳೇಗಾಲ ತಾಲೂಕಿನ ಕೊತ್ತನೂರು ಗ್ರಾಮದ ನಿವಾಸಿ ಕೀರ್ತಿ ಮತ್ತು ಇಕ್ಕಡಹಳ್ಳಿ ಗ್ರಾಮದ ನಿವಾಸಿ ಕುಮಾರಿ ಎಂಬುವರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪಾಲಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಕಾರಣ ಯುವತಿ ಕುಮಾರಿ ಮನೆ ಬಿಟ್ಟು ತನ್ನ ಪ್ರಿಯಕರನ ಜತೆಗೆ ತೆರಳಿದ್ದಳು. ಕುಮಾರಿ ನಾಪತ್ತೆಯಾಗಿದ್ದು, ನನ್ನ ಮಗಳನ್ನು ಹುಡುಕಿಕೊಡುವಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದರು. ತಮ್ಮ ಪ್ರೀತಿಗೆ ಮನೆಯವರು ಒಪ್ಪದ ಹಿನ್ನೆಲೆಯಲ್ಲಿ ಪ್ರೇಮಿಗಳು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಕೆ.ಸಿದ್ದರಾಜು ಅವರಿಗೆ ಪ್ರೀತಿ ವಿಚಾರ ತಿಳಿಸಿ ಬೆಂಬಲ ಕೋರಿದ್ದರು.

ಡಿಎಸ್‌ಎಸ್ ದೊಡ್ಡಿಂದುವಾಡಿ ಸಿದ್ದರಾಜು ಮತ್ತು ತಾಲೂಕು ಸಂಚಾಲಕ ಕೊತ್ತನೂರು ಚಿಕ್ಕದೊಡ್ಡಯ್ಯ ಪೊಲೀಸ್ ಠಾಣೆಗೆ ಪ್ರೇಮಿಗಳ ಎರಡೂ ಕಡೆಯ ಪಾಲಕರನ್ನು ಭೇಟಿ ಮಾಡಿದ್ದಾರೆ. ಇವರನ್ನು ಬೇರ್ಪಡಿಸಬಾರದು ಎಂದು ಮನವರಿಕೆ ಮಾಡಿಕೊಟ್ಟು ವಿವಾಹ ಮಾಡಿಕೊಡಲು ಒಪ್ಪಿಸಿದ್ದಾರೆ.

ನಂತರ ಎರಡೂ ಮನೆಯ ಪಾಲಕರು, ಗ್ರಾಮದ ಜಯಮಾನರು, ರೈತ ಸಂಘದ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಕೀರ್ತಿ ಮತ್ತು ಕುಮಾರಿ ವಯಸ್ಕರಾಗಿದ್ದು. ಪರಸ್ಪರ ಪ್ರೀತಿಸಿ ಮದುವೆಗೆ ಮಾಡಿಕೊಳ್ಳಲು ಇಚ್ಛಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ, ಪ್ರೇಮಿಗಳು ನಾವಿಬ್ಬರೂ ಮದುವೆ ಆಗುವುದಾಗಿ ತಿಳಿಸಿದ್ದು ಪೊಲೀಸರು ಇಬ್ಬರಿಂದಲೂ ಹೇಳಿಕೆ ಪಡೆದು ಕಳುಹಿಸಿಕೊಟ್ಟಿದ್ದಾರೆ. ನಂತರ ಠಾಣೆ ಹೊರಗಡೆ ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ಹಂಚಿ, ಪ್ರೇಮಿಗಳು ಸಂಭ್ರಮಿಸಿದರು.

ಪ್ರೇಮಿಗಳಾದ ಕುಮಾರಿ ಹಾಗೂ ಕೀರ್ತಿ ವಿವಾಹ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದು ಡಿಎಸ್‌ಎಸ್ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net