

ಕಲಬುರಗಿ : ಚಿತ್ತಾಪುರ ತಾಲೂಕಿನ ಚೌಕಂಡಿ ತಾಂಡಾ ಬಳಿ ಪ್ರೇಮಿಗಳು ವಿಷ ಕುಡಿದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೊಲ್ಲೂರು ಗ್ರಾಮದ ಆಕಾಶ ಭೋವಿ(18) ಹಾಗೂ ನೆರೆಯ ಗ್ರಾಮದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು.
ಐಟಿಐ ಅಧ್ಯಯನ ಮಾಡುತ್ತಿದ್ದ ಆಕಾಶ, ಕೊಲ್ಲೂರು ಗ್ರಾಮದಿಂದ ಯಾದಗಿರಿಗೆ ಹೋಗಿಬರುತ್ತಿದ್ದ. ಪಕ್ಕದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ
ವಿಷ ಕುಡಿಯುವ ಮುನ್ಮ ಆಕಾಶ, ತನ್ನ ತಾಯಿಗೆ ಫೋನ್ ಕರೆ ಮಾಡಿದ್ದ. 'ನಾವಿಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮನ್ನು ಹುಡುಕಬೇಡಿ' ಎಂದು ಹೇಳಿ ಕರೆ ಕಟ್ ಮಾಡಿದ್ದ ಎನ್ನಲಾಗಿದೆ.
ನಂತರ ಕುಟುಂಬಸ್ಥರು ಹುಡುಕಾಡಿದ್ದು, ತಡರಾತ್ರಿ ಚೌಕಂಡಿ ತಾಂಡಾ ಸಮೀಪದ ಯಲ್ಲಮ್ಮ ದೇವಿ ದೇವಸ್ಥಾನದ ಬಳಿ ಇಬ್ಬರು ಸಾವು- ಬದುಕಿನ ಮಧ್ಯೆ ಒದ್ದಾಡುತ್ತಿದ್ದರು. ಇಬ್ಬರನ್ನು ಸ್ಥಳೀಯ ಕೊಲ್ಲೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಕಲಬುರಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಶವಗಳು ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸ್ಥಳಕ್ಕೆ ವಾಡಿ ಪಿಎಸ್ಐ ತಿರುಮಲೇಶ ಕುಂಬಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.