ಹಂಸಲೇಖ ಮಾತಿಗೂ ಮೀರಿ ನಡೆದ ಪ್ರೇಮಿಗಳು; ಪ್ರಾಣ ಕಳೆದುಕೊಂಡರು!

Untitled-2
Published on

ತಿಪಟೂರು: 'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು..' ಎಂದು ಖ್ಯಾತ ಸಾಹಿತಿ ಹಂಸಲೇಖ ಇಡೀ 'ಪ್ರೇಮಲೋಕ'ಕ್ಕೆ ಸಾರಿದ್ದರೂ ಇಲ್ಲಿಬ್ಬರು ಪ್ರೇಮಿಗಳು ಆ ಮಾತಿಗೂ ಮೀರಿ ನಡೆದುಕೊಳ್ಳುವ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಈ ಪ್ರೇಮಿಗಳು ಬಾಗೂರು ಬಳಿ ಹೇಮೆ ನಾಲೆಗೆ ಹಾರಿದ್ದು, ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನೊಣವಿನಕೆರೆ ಲಿಂಗದಹಳ್ಳಿ ಬಳಿ ಪ್ರೇಮಿಗಳಿಬ್ಬರ ಶವ ಪತ್ತೆಯಾಗಿದೆ. ರಮೇಶ್ (19), ಸುಶ್ಮಿತಾ (19) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು. ಪರಸ್ಪರ ಪ್ರೀತಿಸುತ್ತಿದ್ದ ಈ ಯುವಕ-ಯುವತಿ ಮನೆಯವರನ್ನು ಎದುರಿಸಲಾಗದೆ ಸಾವಿಗೆ ಶರಣಾಗಿದ್ದಾರೆ.

ಬೇರೆ ಬೇರೆ ಕೋಮಿಗೆ ಸೇರಿರುವ ಇವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಜಾತಿಯ ಕಾರಣಕ್ಕೆ ಮನೆಯಲ್ಲಿ ಮದುವೆಗೆ ಅನುಮತಿ ನೀಡುವುದಿಲ್ಲ ಎಂದು ಹೆದರಿದ ಇವರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಐಟಿಐ ವಿದ್ಯಾರ್ಥಿಯಾಗಿದ್ದು, ಸುಷ್ಮಿತಾ ಪದವಿ ವಿದ್ಯಾರ್ಥಿನಿ ಆಗಿದ್ದಳು.

ಪ್ರೇಮಿಗಳಿಬ್ಬರು ಒಟ್ಟಿಗೆ ಕಾಲುವೆಗೆ ಹಾರಿದ್ದು, ಶವಗಳು ಕೂಡ ತಬ್ಬಿಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿವೆ. ನಾಲೆಯಲ್ಲಿ ತೇಲುತ್ತಿದ್ದ ಶವಗಳನ್ನು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದಿನಗಳ ಹಿಂದೆಯೇ ಪ್ರೇಮಿಗಳು ನಾಪತ್ತೆ ಆಗಿದ್ದು, ಆ ಕುರಿತು ಹಿರಿಸಾವೆ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು. ಪ್ರೇಮಿಗಳು ಬಂದಿದ್ದ ಬೈಕ್​ ಹಾಗೂ ಇಬ್ಬರ ಚಪ್ಪಲಿ ನಾಲೆ ಬಳಿ ಅನಾಥವಾಗಿ ಕಂಡುಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net