

ಚಿಕ್ಕಬಳ್ಳಾಪುರ: ನೀರು ಕೇಳುವ ನೆಪದಲ್ಲಿ ವೃದ್ಧೆ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣ ಸಂಬಂಧ ಕಳ್ಳ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಮುದುಗೆರೆಯ ಗೋವಿಂದರಾಜು (30) ಹಾಗೂ ಅಶ್ವಿನಿ (19) ಬಂಧಿತರು.
ಈ ಇಬ್ಬರೂ ಪ್ರೇಮಿಗಳಾಗಿದ್ದು, ಬಾಡಿಗೆ ಮನೆಯಲ್ಲಿ ಸಂಸಾರ ನಡೆಸಲು ಹಣಕ್ಕಾಗಿ ಸುಲಿಗೆ ಮಾಡಲು ಹೋಗಿ ಜೈಲು ಪಾಲಾಗಿದ್ದಾರೆ. ಗರ್ಭಿಣಿ ಪ್ರಿಯತಮೆಯನ್ನು ಜತೆಗಿರಿಸಿಕೊಂಡು ಗೋವಿಂದರಾಜು ದುಷತ್ಯವೆಸಗಿದ್ದಾನೆ.
*ಪ್ರಕರಣದ ಹಿನ್ನೆಲೆ
ಮೇ 26ರಂದು ಕಳವಾರದ ಆಂಜಿನಮ್ಮ ಸಮೀಪದ ಗಂಟಿಗಾನಹಳ್ಳಿಯ ಜಮೀನಿನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿ ನಿಂತಿದ್ದಾಗ ಗೋವಿಂದರಾಜು ಹಾಗೂ ಅಶ್ವಿನಿ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಮಳೆ ಸುರಿಯುತ್ತಿರುವುದರಿಂದ ಸ್ವಲ್ಪ ಹೊತ್ತು ನಿಂತು ಹೋಗುವುದಾಗಿ ಹೇಳಿ ಕಟ್ಟಡದ ಗೋಡೆ ಬಳಿ ಆಶ್ರಯ ಪಡೆದುಕೊಂಡಿದ್ದಾರೆ. ಇದರ ನಡುವೆ ಹೋಗುವಾಗ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀರು ಕೇಳಿದ್ದು, ಇದನ್ನು ನಂಬಿ, ವೃದ್ಧೆ ಮನೆಯೊಳಗೆ ತೆರಳುತ್ತಿದ್ದಂತೆ ಹಿಂಬಾಲಿಸಿ, ಹಲ್ಲೆ ಮಾಡಿದ್ದಾರೆ. ಬಾಯಿಗೆ ಬಟ್ಟೆ ತುರುಕಿ, ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾರೆ. ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ನಂದಿ ಗಿರಿಧಾಮ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2 ಮಾಂಗಲ್ಯ ಸರ, ಬಂಗಾರದ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.