

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆ ಪೇದೆಯೊಬ್ಬ ಪ್ರೀತಿ ಹೆಸರಿನಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗದೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಹಡಗಲಿ ತಾಲೂಕಿನ ಗ್ರಾಮವೊಂದರ ಯುವತಿಗೆ ಪೇದೆ ಸಂತೋಷ ಹರವಿ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ ಎಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು, ಮದುವೆಯ ಪ್ರಸ್ತಾಪ ಬಂದಾಗ, ಪೇದೆ ಜಾತಿ ನೆಪವೊಡ್ಡಿ ಯುವತಿಯನ್ನು ದೂರವಿಟ್ಟಿದ್ದಾನೆ. ಮೊದಲು ರಾಜಿ ಪಂಚಾಯಿತಿ ನಡೆಸಲಾಗಿದೆ. ಆದರೆ, ಅದ್ಯಾವುದಕ್ಕೂ ಒಪ್ಪದ ಯುವತಿ ಮದುವೆಯಾಗುವಂತೆ ಪಟ್ಟು ಹಿಡಿದಿರುವುದರಿಂದ ಪೇದೆ ರಜೆ ಹಾಕಿ ಕಾಣೆಯಾಗಿದ್ದಾನೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ನ್ಯಾಯಕ್ಕಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪೇದೆಯೊಬ್ಬ ಯುವತಿಗೆ ವಂಚಿಸಿರುವ ಪ್ರಕರಣದ ಕುರಿತು ತನಿಖೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ಬಳಿಕ ವಿವರ ತಿಳಿಸುವೆ. | ಸಿ.ಕೆ.ಬಾಬಾ ಎಸ್ಪಿ, ಬಳ್ಳಾರಿ