ಪಠ್ಯ ವಿಷಯವನ್ನು ಆಳವಾಗಿ ಪ್ರೀತಿಸಿ

1
Published on

ಮೈಸೂರು: ಪಠ್ಯ ವಿಷಯವನ್ನು ಮನದಾಳದಲ್ಲಿ ಪ್ರೀತಿಸಿದಾಗ ಮಾತ್ರ ಉತ್ತಮ ಅಂಕದೊಂದಿಗೆ ಉಜ್ವಲ ಭವಿಷ್ಯವೂ ನಿರ್ಮಾಣವಾಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಹೇಳಿದರು.


ವಿಜ್ಞಾನ ಭವನದಲ್ಲಿ ಬುಧವಾರ ಮೈಸೂರು ವಿವಿಯ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಹೊಸ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಉತ್ತೀರ್ಣರಾಗುವ ಗುರಿ ಇಟ್ಟುಕೊಳ್ಳದೆ ಉದಾತ್ತ ಧ್ಯೇಯ ಸಾಧನೆಯ ಸಂಕಲ್ಪ ಮಾಡಬೇಕು. ಪಠ್ಯದ ಆಚೆಗೂ ಇರುವ ಸಾಧ್ಯತೆಗಳನ್ನು ಚಿಂತನೆ ಮಾಡಬೇಕು. ಆಗ ಅಧ್ಯಯನದಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಈ ಮೂಲಕ ರಾಷ್ಟ್ರದ ಮರುನಿರ್ಮಾಣಕ್ಕೆ ಮಹೋನ್ನತ ಕೊಡುಗೆಗಳನ್ನು ನೀಡಲು ಭದ್ರ ನೆಲೆಗಟ್ಟು ನಿರ್ಮಾಣವಾಗುತ್ತದೆ ಎಂದರು.
ಮೈಸೂರು ವಿವಿಗೆ ವಿಶ್ವಮಾನ್ಯತೆ ಇದೆ. ಅದನ್ನು ಉಳಿಸಿಕೊಂಡು ಬರುವುದರೊಂದಿಗೆ ಬದುಕನ್ನೂ ಉಜ್ವಲಗೊಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇಂಜಿನಿಯರಿಂಗ್ ಅಧ್ಯಯನ ಎಂದರೆ ಅದು ಕ್ರಿಯಾಶೀಲ ವೃತ್ತಿಗೆ ತಾಲೀಮು. ಇದಕ್ಕೆ ತಜ್ಞ ಬೋಧಕರೇ ಪ್ರೇರಕ ಶಕ್ತಿ. ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ನಾಳಿನ ಶ್ರೇಷ್ಠ ತಂತ್ರಜ್ಞರಾಗಬೇಕು ಎಂದರು.

ಕುಲಸಚಿವ ಪ್ರೊ.ಆರ್. ಶಿವಪ್ಪ ಮಾತನಾಡಿ, ಸದುದ್ದೇಶ ಮತ್ತು ಉದಾತ್ತ ಧ್ಯೇಯದೊಂದಿಗೆ ಮಾಡಿದ ಅಧ್ಯಯನ ಶ್ರೇಷ್ಠ ಫಲ ಕೊಟ್ಟೇ ಕೊಡುತ್ತದೆ ಎಂದರು.
ಉತ್ತಮವಾದ ಸಂಸ್ಕೃತಿ ಮತ್ತು ಸಂಸ್ಕಾರ ರೂಢಿಸಿಕೊಂಡವ ಮಾತ್ರ ಮಾದರಿ ವಿದ್ಯಾರ್ಥಿ ಆಗುತ್ತಾನೆ. ಮುಂದೊಂದು ದಿನ ತನ್ನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸುತ್ತಾನೆ. ಅದಕ್ಕಾಗಿ ಸತತ ಪರಿಶ್ರಮ ಹಾಕುವಲ್ಲಿ ಮುಂದಾಗಿ ಎಂದವರು ಕಿವಿಮಾತು ಹೇಳಿದರು.

ಸದಾ ಉತ್ಸಾಹವಂತರಾಗಿ, ವರ್ತಮಾನದಲ್ಲಿ ಜೀವಿಸುವ ಕಲೆ ಕರಗತ ಮಾಡಿಕೊಂಡರೆ ಯಾವ ಪಠ್ಯವಿಷಯವೂ ಕಷ್ಟವಾಗದು. ಅಭ್ಯುದಯಕ್ಕೆ ಪೂರಕವಾಗುವ ಸ್ನೇಹಿತರು, ಏಳಿಗೆಗೆ ಬೇಕಾದ ಆಂತರಿಕ ಸಾಮರ್ಥ್ಯಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ಈ ನಿಟ್ಟಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಖ್ಯಾತಿಯನ್ನು ಜಗತ್ತಿನೆಲ್ಲೆಡೆ ಪಸರಿಸಲು ಮುಂದಾಗಿ ಎಂದವರು ಹಾರೈಸಿದರು.
ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ನಿರ್ದೇಶಕ ಪ್ರೊ. ಅನಂತಪದ್ಮನಾಭ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ವಿಶೇಷಾಧಿಕಾರಿ ಚೇತನ್, ಡೀನ್ ಡಾ.ಶಂಕರ್, ಸಿಂಡಿಕೇಟ್ ಸದಸ್ಯ ಡಾ.ಇ.ಸಿ. ನಿಂಗರಾಜಗೌಡ ಇತರರು ಹಾಜರಿದ್ದರು. ನಿವೃತ್ತಿ ಹೊಂದಲಿರುವ ಕುಲಪತಿಗಳಿಗೆ ಇದೇ ಸಂದರ್ಭ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ವೇತನ ಹೆಚ್ಚಳ ಭರವಸೆ
ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಎಲ್ಲ ಬೋಧಕರಿಗೂ ವೇತನ ಹೆಚ್ಚಳ ಮಾಡಲಾಗುವುದು ಎಂದು ಕುಲಪತಿ ಹೇಮಂತಕುಮಾರ್ ಭರವಸೆ ನೀಡಿದರು.
ಬೋಧಕರು ನಮ್ಮ ವಿವಿಯ ಬಹುದೊಡ್ಡ ಶಕ್ತಿ. ಅವರು ಸಂತೃಪ್ತರಾಗಿ ಸೇವೆ ಸಲ್ಲಿಸಿದರೆ ಮಾತ್ರ ದೇಶ ಕಟ್ಟುವ ತಂತ್ರಜ್ಞರು ಇಲ್ಲಿ ನಿರ್ಮಾಣವಾಗುತ್ತಾರೆ. ಹಾಗಾಗಿ, ಕೆಲವೇ ದಿನಗಳಲ್ಲಿ ವೇತನ ಹೆಚ್ಚಳ ಮಾಡಿ ನಿವೃತ್ತಿ ಹೊಂದುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net