ಪತಿ ಬೇಕೆಂದು ಎಸ್ಪಿ ಕಚೇರಿ ಮೆಟ್ಟಿಲೇರಿದ ನವವಿವಾಹಿತೆ

3
Published on

ಶಿವಮೊಗ್ಗ: ಪ್ರೇಮ ವಿವಾಹವಾದ ಒಂಬತ್ತು ದಿನಕ್ಕೆ ಪತಿಯನ್ನು ಅವರ ಸಂಬಂಧಿಕರು ಅಪಹರಿಸಿದ್ದು ಹುಡುಕಿಕೊಡುವಂತೆ ನವ ವಿವಾಹಿತೆಯೊಬ್ಬರು ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾಳೆ.

ಚನ್ನಗಿರಿ ತಾಲೂಕು ಮರವಂಜಿ ಗ್ರಾಮದ ರವಿರಾಜ್ ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಆತನ ಪತ್ನಿ, ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ಅಂಬಿಕಾ ಹೊಳೆಹೊನ್ನೂರು ಠಾಣೆಗೆ ವಾರದ ಹಿಂದೆ ದೂರು ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಮರವಂಜಿ ಗ್ರಾಮಕ್ಕೆ ಮರಳಿದ್ದರು. ಮನೆಯಲ್ಲಿ ತಂದೆ ಶೇಖರಪ್ಪ ಅವರೊಂದಿಗೆ ಮನಸ್ತಾಪ ಆಗಿದ್ದರಿಂದ ಅರಬಿಳಚಿಗೆ ತೆರಳಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ಅಲ್ಲಿಗೂ ಬಂದಿದ್ದ ಆತನ ತಂದೆ ಊರಿಗೆ ಬರುವಂತೆ ಸೂಚಿಸಿದ್ದರು. ಇದರಿಂದ ಆತಂಕಗೊಂಡ ಆತ ಅರಕೆರೆಗೆ ತೆರಳಿ ದೂರದ ಸಂಬಂಧಿಯೂ ಆಗಿದ್ದ ಅಂಬಿಕಾ ಅವರ ಮನೆಯಲ್ಲೇ ಕಳೆದೊಂದು ತಿಂಗಳಿಂದ ವಾಸವಾಗಿದ್ದ.

ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿ ಅರಕೆರೆ ಗ್ರಾಮದ ದೇವಾಲಯದಲ್ಲಿ ಮೇ 12ರಂದು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಅದಾದ ಬಳಿಕ ಇಬ್ಬರು ನಗರದ ಎಪಿಎಂಸಿ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅಲ್ಲಿಗೂ ರವಿರಾಜ್ ತಂದೆ ಕಡೆಯವರು ಬಂದು ಅಂಬಿಕಾಳನ್ನು ಬಿಟ್ಟುಬರುವಂತೆ ಬೆದರಿಕೆ ಹಾಕಿ ಹೋಗಿದ್ದರು. ಇದರಿಂದ ಹೆದರಿದ ಇಬ್ಬರು ಮತ್ತೆ ಅರಕೆರೆಗೆ ವಾಪಸಾಗಿದ್ದರು.

ಈ ವೇಳೆ ಕಾರಿನಲ್ಲಿ ಬಂದ ಹೊಟ್ಟೆ ಕರಿಬಸಪ್ಪರ ಮಂಜು, ಲಕ್ಕಪ್ಪರ ಮಂಜು, ಹಾಸನಗೌಡ್ರ ಕಿರಣ್ ಹಾಗೂ ಕಾರು ಚಾಲಕ ಮಂಜು ಎಂಬುವರು ರವಿರಾಜ್ ಮೇಲೆ ಹಲ್ಲೆ ನಡೆಸಿ ಕಿಡ್ನಾಪ್ ಮಾಡಿದ್ದಾರೆ ಎಂದು ಹೊಳೆಹೊನ್ನೂರು ಠಾಣೆಗೆ ಮೇ 21ರಂದೇ ಅಂಬಿಕಾ ದೂರು ನೀಡಿದ್ದರು. ದೂರು ನೀಡಿ 13 ದಿನ ಆದರೂ ಪೊಲೀಸರು ರವಿರಾಜ್​ನನ್ನು ಪತ್ತೆ ಮಾಡದ ಹಿನ್ನೆಲೆಯಲ್ಲಿ ಎಸ್ಪಿ ಕೆ.ಎಂ.ಶಾಂತರಾಜು ಅವರನ್ನು ಭೇಟಿಯಾಗಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಅಂಬಿಕಾ ಮನವಿ ಮಾಡಿದ್ದಾರೆ.

ಅಂಬಿಕಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದರು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜೂ.9ರಂದು ಮದುವೆ ನೋಂದಣಿ ಮಾಡಿಸುವುದನ್ನು ಅರಿತು ರವಿರಾಜ್ ಅವರನ್ನು ಅವರ ಸಂಬಂಧಿಕರೇ ಕಿಡ್ನಾಪ್ ಮಾಡಿದ್ದಾ ಎಂದು ಅಂಬಿಕಾ ಸಂಬಂಧಿಕರು ಆರೋಪಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net