ಹದಿಹರೆಯದ ವಯಸ್ಸಲ್ಲೇ ಪ್ರೀತಿ, ಪ್ರೇಮ: ಒಂದೇ ಮರಕ್ಕೆ ನೇಣಿಗೆ ಶರಣಾದ ಪ್ರೇಮಿಗಳು!

sucide
Published on

ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸಲ್ಲೇ ಪರಸ್ಪರ ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಯುವಕ ಇಬ್ಬರೂ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯ ಚಿಕ್ಕದಾಸೇನಹಳ್ಳಿ-ಬೀರಪ್ಪನಹಳ್ಳಿ ಮಾರ್ಗದ ಮಾವಿನ ಮರದ ತೋಪಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾರಾಮಪುರದ ಕ್ಲೀನರ್ ನವೀನ್(20), ಹಾಗೂ ಆತನ ಪ್ರೇಯಸಿ ಅದೇ ಗ್ರಾಮದ ಬಾಲಕಿ ಮೃತಪಟ್ಟವರು.

ಏನಿದು ಪ್ರಕರಣ?:

ಅಪ್ರಾಪ್ತ ಬಾಲಕಿಯು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ ಬಾಲಕಿ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಬಾಲಕಿ ಹಾಗೂ ನವೀನ್ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇಬ್ಬರ ಪ್ರೀತಿಗೆ ಕುಟುಂಬದ ವಿರೋಧವಿದ್ದು, ಕಳೆದ ಮಾರ್ಚ್‌ನಲ್ಲಿ ಬಾಲಕಿಯ ಕುಟುಂಬದವರು ನವೀನ್ ವಿರುದ್ಧ ಚಿಂತಾಮಣಿಯ ಬಟ್ಲಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ಸಹ ದಾಖಲಿಸಿದ್ದರಿಂದ ನವೀನ್ ನ್ಯಾಯಾಂಗ ಬಂಧನಲ್ಲಿದ್ದ. ಇತ್ತೀಚೆಗಷ್ಟೆ ನ್ಯಾಯಲಯ ಬಂಧನದಿಂದ ಬಿಡುಗಡೆ ಆಗಿದ್ದ ನವೀನ್, ಬಾಲಕಿಯನ್ನು ಮತ್ತೆ ಭೇಟಿ ಮಾಡಿದ್ದು, ಇಬ್ಬರೂ ಜೊತೆಗೂಡಿ ಚಿಕ್ಕದಾಸೇನಹಳ್ಳಿ-ಬೀರಪ್ಪನಹಳ್ಳಿ ಮಾರ್ಗದ ಮಾವಿನ ಮರದ ತೋಪಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಗೆ ಬಂದಿದ್ದ ಬಾಲಕಿಯು ಶಾಲಾ ಸಮವಸದಲ್ಲೇ ಇದ್ದು, ಆಕೆಯ ಬ್ಯಾಗ್, ಪುಸ್ತಕಗಳು ಆತ್ಮಹತ್ಯೆ ಸ್ಥಳದಲ್ಲೇ ಬಿದ್ದಿವೆ.

ಡಿವೈಎಸ್ಪಿ ಮುರಳೀಧರ್, ಸಿಪಿಐಎಂ.ಶ್ರೀನಿವಾಸ್, ಗ್ರಾಮಾಂತರ ಠಾಣೆ ಎಸ್‌ಐ ಸತೀಶ್, ನಗರ ಠಾಣೆಯ ಎಸ್‌ಐ ಕೆ.ವೇಣುಗೋಪಾಲ್, ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೇದೆ ಎಸ್.ಎಂ. ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಗೆ ಆಗ್ರಹ: ಪೋಕ್ಸೋ ಪ್ರಕರಣ ಸಂಬಂಧ ಬಾಲಕಿಯು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಬಾಲಕಿಯರ ಬಾಲ ಮಂದಿರದ ವಶದಲ್ಲಿದ್ದು, ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದಳು. ಶಾಲೆಗೆ ಹೋಗದೆ ಯುವಕನ ಜತೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ಬಾಲಕಿಯರ ಬಾಲ ಮಂದಿರದ ಮೇಲ್ವಿಚಾರಕರ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕಿಯ ಕುಟುಂಬದವರು ದೂರುತ್ತಿದ್ದಾರೆ. ಶಾಲೆಗೆ ಗೈರಾದ ಕೂಡಲೇ ಶಿಕ್ಷಕರು ಬಾಲಕಿಯರ ಬಾಲ ಮಂದಿರದ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಬಾಲ ಮಂದಿರಕ್ಕೆ ಬಾಲಕಿಯು ವಾಪಸ್ ಆಗದಿದ್ದಾಗ ಬಾಲ ಮಂದಿರದ ಮೇಲ್ವಿಚಾರಕರು ಪಾಲಕರಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ನೀಡಬೇಕಿತ್ತು. ಇದ್ಯಾವುದು ಆಗಿಲ್ಲ. ಹಾಗಾಗಿ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಬಾಲಕಿಯ ಪಾಲಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net