ಕನ್ನಡವನ್ನು ತಾಯಿಯಂತೆ ಪ್ರೀತಿಸಿ: ಪ್ರೊ.ತ್ರಿವೇಣಿ

5 - Copy
Published on

ಮೈಸೂರು: ಕನ್ನಡ ರಾಜ್ಯೋತ್ಸವವನ್ನು ವರ್ಷ ಪೂರ್ತಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಸಲಹೆ ನೀಡಿದರು.

ಯೂತ್ ಹಾಸ್ಟೆಲ್, ಭಾರತ ಸೇವಾದಳ ಜಿಲ್ಲಾ ಸಮಿತಿ, ಭಾರತ ಸೇವಾದಳ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕೇವಲ ನವೆಂಬರ್‌ಗೆ ಮೀಸಲು ಮಾಡಬಾರದು. ಬದಲಿಗೆ ಕನ್ನಡ ರಾಜ್ಯೋತ್ಸವ ಜನರ ಮನಸ್ಸಿನಲ್ಲಿ ಉಳಿಯುವ ದೀರ್ಘಕಾಲದ ಆಚರಣೆಯಾಗಬೇಕು ಎಂದರು. ಬಳಿಕ ಯೂತ್ ಹಾಸ್ಟೆಲ್‌ನ ಸ್ಥಾಪನೆ ಮತ್ತು ಕಾರ್ಯಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.

ನಟರಾಜ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ತ್ರಿವೇಣಿ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಅಭಿಮಾನ ಬೆಳೆಸಿಕೊಂಡು ಕನ್ನಡ ಉಳಿಸಿ, ಬೆಳೆಸಬೇಕು ಎಂದರು.
ಕನ್ನಡದ ಜತೆಗೆ ಇಂಗ್ಲಿಷ್ ಕೂಡ ಕಲಿಯಬೇಕಾಗಿದೆ. ಆದರೆ, ನಮ್ಮ ತಾಯಿಯ ರೀತಿ ಕನ್ನಡವನ್ನು ಪ್ರೀತಿಸಬೇಕು. ಕನ್ನಡದ ಜತೆಗೆ ಇತರೆ ಭಾಷೆಗೂ ಗೌರವ ನೀಡಬೇಕು ಎಂದರು.

ನಮ್ಮ ಕರ್ನಾಟಕ ಶ್ರೀಗಂಧದ ನಾಡಾಗಿದೆ. ಇಲ್ಲಿ ಅಪಾರ ಸಾಧು ಸಂತರು ಹುಟ್ಟಿದ್ದಾರೆ. ನಮ್ಮ ನಾಡಿನಲ್ಲಿ ಎಲ್ಲವೂ ಇದೆ. ನಮ್ಮ ನಾಡಿಗೆ ‘ಕನ್ನಡ ನಾಡು’ ಎಂಬ ಹೆಸರು ಹೊಂದಿರುವುದೇ ಧೀಮಂತ ಶಕ್ತಿಯಾಗಿದೆ. ಇಲ್ಲಿ ನಾವು ಹುಟ್ಟಿರುವುದೇ ದೊಡ್ಡ ಪುಣ್ಯ. ಆದ್ದರಿಂದ ಮಕ್ಕಳು ಇದು ನಮ್ಮ ರಾಜ್ಯ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಜಾತಿ, ಮತ ಭೇದ ಮರೆತು ಹೊಂದಾಗಿ ಬಾಳಬೇಕು ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ಗೆಲುವು ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಯೂತ್ ಹಾಸ್ಟೆಲ್‌ನ ವ್ಯವಸ್ಥಾಪಕ ಡಾ.ಪ್ರಸಾದ್, ಭಾರತ ಸೇವಾದಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬೀರಿಹುಂಡಿ ಬಸವಣ್ಣ, ನಿರ್ದೇಶಕ ಡಿ.ಆರ್.ಶೇಷಾಚಲ ಇತರರಿದ್ದರು.
ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ವಿಪತ್ತು ನಿವರ್ಹಣೆ ಸಂಬಂಧ ಕಲ್ಪಿತ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net