ಕನ್ನಡ ಪ್ರೀತಿಸಿ,ಬೆಳೆಸುವ ಕಾರ್ಯವಾಗಲಿ

MDG KARNATAKA SAMBHRAMA
Published on

ಮುಂಡರಗಿ: ಕನ್ನಡವನ್ನು ಪ್ರೀತಿಸಿ-ಬೆಳೆಸದಿದ್ದರೆ ಕನ್ನಡಕ್ಕೆ ಕಂಟಕ ತಪ್ಪಿದ್ದಲ್ಲ. ಪ್ರತಿಯೊಬ್ಬರೂ ಎಚ್ಚೆತ್ತುಗೊಂಡು ಕನ್ನಡ ಪ್ರೀತಿಸಿ, ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ತಾಲೂಕು ಕಸಾಪ ಮತ್ತು ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಆಶ್ರಯದಲ್ಲಿ ಬುಧವಾರ ಜರುಗಿದ ಕರ್ನಾಟಕ ಸಂಭ್ರಮ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ತಾಲೂಕು ಕಸಾಪ ಘಟಕ ಕನ್ನಡ ನಾಡ-ನುಡಿ ಕುರಿತು ಒಂದು ವರ್ಷದಲ್ಲಿ 70ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಿ ಕನ್ನಡದ ಬಗ್ಗೆ ಜನರು ಮತ್ತು ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಶ್ರೀ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಭವನ ನಿರ್ವಣವಾಗುತ್ತಿರುವುದು ಅಭಿನಂದನೀಯ. ಹಾಗೆಯೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಗುರುತಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಬಿ. ಹಿರೇಮಠ ಮಾತನಾಡಿ, ಒಂದೇ ದೇಶ ಮತ್ತು ಒಂದೇ ಭಾಷೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ತವಕದಲ್ಲಿದೆ. ಇದರಿಂದ ಕನ್ನಡ ಭಾಷೆ ತನ್ನತನ ಕಳೆದುಕೊಳ್ಳುತ್ತದೆ. ಇದು ಜಾರಿಯಾಗಬಾರದು. ಕನ್ನಡ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಪರಿಚಯಿಸುವ ಕೆಲಸವನ್ನು ಕಸಾಪ ಮಾಡಿರುವುದು ಶ್ಲಾಘನೀಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಚುಟುಕು ಭೂಷಣ ಪ್ರಶಸ್ತಿಗೆ ಭಾಜನರಾದ ಪೂಜ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.</p><p>ಶಂಕರ ಕುಕನೂರ, ವೀಣಾ ಪಾಟೀಲ, ಶಿವಾನಂದ ಗಿಡ್ನಂದಿ, ಬಟ್ಟೂರ, ಡಾ.ಬಿ.ಜಿ. ಜವಳಿ, ನಾಗರಾಜ ಹಳ್ಳಿಕೇರಿ, ಇತರರಿದ್ದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಆರ್.ವೈ. ಪಾಟೀಲ ನಿರ್ವಹಿಸಿದರು.

ವಿಜಯವಾಣಿ ವಿಶೇಷ ವರದಿ ಪ್ರಸ್ತಾಪ

ವಿಜಯವಾಣಿ ಪತ್ರಿಕೆಯಲ್ಲಿ ಡಿ. 27ರಂದು ಪ್ರಕಟವಾದ ‘ಮುಂಡರಗಿ ಸ್ಮಾರಕಗಳಿಗೂ ಸಿಗಲಿ ಆದ್ಯತೆ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿ ಪ್ರಸ್ತಾಪಿಸಿದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು, ಮುಂಡರಗಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ತಾಲೂಕಿನ ಕೋಟೆ-ಕೊತ್ತಲಗಳ, ಪ್ರಾಚೀನ ಗುಡಿಗುಂಡಾರಗಳ ಜೀಣೋದ್ಧಾರವಾಗುವುದು ಅವಶ್ಯವಾಗಿದೆ. ಜಗದ್ಗುರು ಅನ್ನದಾನೀಶ್ವರ ಮಠವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ತನ್ನದೆಯಾದ ಕೊಡುಗೆ ನೀಡಿದೆ. ಪ್ರಾಚ್ಯ ಸ್ಥಳಗಳು ಸ್ಮಾರಕಗಳಾಗಿ ತಲೆ ಎತ್ತಬೇಕು ಎಂದು ಆಶಿಸಿದರು.

ಮುಂಡರಗಿ, ಕರ್ನಾಟಕ ಸಂಭ್ರಮ-50ರ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಡಾ.ಅನ್ನದಾನೀಶ್ವರ ಶಿವಯೋಗಿಗಳು, ಎ.ಬಿ. ಹಿರೇಮಠ, ವಿವೇಕಾನಂದಗೌಡ ಪಾಟೀಲ, ಎಂ.ಜಿ. ಗಚ್ಚಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net