ಲವ್ ಜಿಹಾದ್ ತಡೆಗೆ ವಿಶೇಷ ಪೋಲಿಸ್ ದಳ ಸ್ಥಾಪಿಸಲು ಆಗ್ರಹ

udp-17-manavi
Published on

ಉಡುಪಿ: ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗದಲ್ಲಿ ಶಾಹಿನ್ ಗ್ಯಾಂಗ್ ಎಂಬ ಮುಸ್ಲಿಂ ಯುವತಿಯರ ಗುಂಪು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಡಿ ತರಬೇತಿ ಪಡೆದು ಕಾಲೇಜುಗಳಲ್ಲಿ ಹಿಂದೂ ಯುವತಿಯರನ್ನು ಮುಸಲ್ಮಾನ ಯುವಕರಿಗೆ ಪರಿಚಯಿಸಿ ಲವ್ ಜಿಹಾದ್ ನಡೆಸುತ್ತಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ದಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆ ಕಠಿಣವಾಗಿ ಅನುಷ್ಠಾನ ಮಾಡಲು ಹಾಗೂ ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ ವಿಜಯ ಕುಮಾರ್ ಆಗ್ರಹಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 2014 ರಿಂದ 2019ರ ವರೆಗೆ 21,000 ಯುವತಿಯರು ನಾಪತ್ತೆಯಾಗಿದ್ದಾರೆ. ಈ ಎಲ್ಲ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ’ಲವ್ ಜಿಹಾದ್ ನಡೆಯುತ್ತಿದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾಧ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಮತಾಂತರ ತಡೆ ಕಾಯ್ದೆಯಡಿ ದಾಖಲಾಗುವುದಿಲ್ಲ. ಈ ಸಮಸ್ಯೆಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಸಮಿತಿ ಮುಖಂಡರಾದ ವಿಶ್ವನಾಥ ನಾಯಕ್, ದಿನೇಶ್ ಪೂಜಾರಿ, ದೇವೇಂದ್ರ ಪ್ರಭು, ಆನಂದ ಅಮೀನ್, ಶೋಭಾ ಕಾಮತ್, ಉಷಾ ಭಕ್ತ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಹಾಗೂ ಲವ್ ಜಿಹಾದ್ ಘಟನೆಗಳನ್ನು ತಡೆಯಲು ವಿಶೇಷ ಪೋಲಿಸ್ ದಳವನ್ನು ಸ್ಥಾಪಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net