

ಚನ್ನಗಿರಿ: ತಾಲೂಕಿನಲ್ಲಿ ಲವ್‌ಜಿಹಾದ್ ಹಾಗೂ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ತಾಲೂಕು ಘಟಕ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎರ‌್ರಿಸ್ವಾಮಿಗೆ ಶನಿವಾರ ಮನವಿ ಸಲ್ಲಿಸಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಸಹ ಕಾರ್ಯದರ್ಶಿ ಎನ್. ರವಿಚಂದ್ರ ಮಾತನಾಡಿ, ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮದ ಅಪ್ರಾಪ್ತ ಬಾಲಕಿಯರನ್ನು ಕೆಲ ಮತಾಂಧರು ಪ್ರೀತಿಯ ಬಲೆ ಬೀಸಿ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.
ತಾಲೂಕಿನ ಮೆದುಗೊಂಡನಹಳ್ಳಿ ಗ್ರಾಮದ 17 ವರ್ಷದ ಬಾಲಕಿಯನ್ನು ಪ್ರೀತಿ ನೆಪದಲ್ಲಿ ಫೆ. 28 ರಂದು ಗ್ರಾಮದಿಂದ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಚನ್ನಗಿರಿ ಠಾಣೆಯಲ್ಲಿ ಪಾಲಕರು ಮಗಳನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದರೂ ಈವರೆಗೆ ಪತ್ತೆಯಾಗಿಲ್ಲ ಎಂದರು.
ಜತೆಗೆ, ಎಲ್ಲೆಡೆ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಪೊಲೀಸರು ಸಾಕಷ್ಟು ಪ್ರಕರಣ ಪತ್ತೆ ಮಾಡಿದ್ದರೂ ಅಕ್ರಮ ಮಾರಾಟ ನಿಂತಿಲ್ಲ. ಆದ್ದರಿಂದ ಲವ್‌ಜಿಹಾದ್‌ಗೆ ಕಡಿವಾಣ ಹಾಕಿ, ಅಕ್ರಮ ಗಾಂಜಾ ಮಾರಾಟ ತಡೆಗಟ್ಟಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ಮಂಜುನಾಥ್, ಸಂಯೋಜಕ ರಾಜೇಶ್‌ಗೌಡ್ರು, ಬಜರಂಗದಳದ ಸಂಯೋಜಕ ಶ್ರೀನಿವಾಸ್, ತಾಲೂಕು ಸಹ ಕಾರ್ಯದರ್ಶಿ ಹೇಮಚಂದ್ರ ಮತ್ತಿತರರಿದ್ದರು.