

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ನಡೆದಿದೆ ಎನ್ನಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಬಹಿರಂಗಗೊಂಡಿದೆ. ಮುಸ್ಲಿಂ ಹುಡುಗನನ್ನು ಹಿಂದೂ ಹುಡುಗಿಯೊಬ್ಬಳು ಮದುವೆಯಾಗಲು ಹೊರಟಿದ್ದಕ್ಕೆ ಕೆಲವು ಸಂಘಟನೆಗಳ ಸದಸ್ಯರು ಅಡ್ಡಿಯಾಗಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಮಧ್ಯಪ್ರವೇಶಿಸಿದ್ದು, ಮದುವೆಗೆ ತನ್ನ ಒಪ್ಪಿಗೆ ಇದೆ ಎಂಬುದಾಗಿಯೂ ಘೋಷಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಸಮೀದ ಲಕ್ಷ್ಮೀಪುರದ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ರಿಜಿಸ್ಟರ್ಡ್ ಮದುವೆಯಾಗಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದಾಗ ಅವರನ್ನು ತಡೆದ ವಿವಿದ ಸಂಘಟನೆಗಳ ಮುಖ್ಯಸ್ಥರು ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಯುವತಿಯ ತಾಯಿ ಠಾಣೆ ಬಳಿ ಬಂದಿದ್ದು, ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರಿಟ್ಟರು. ನನ್ನ ಮಗಳನ್ನು ನೋಡಲು, ಮಾತನಾಡಲು ಬಿಡಿ ಎಂದು ಗೋಗರೆದರು. ಅಲ್ಲದೆ ಮಗಳು ನನಗೆ ಜೀವ, ಅವಳಿಗೆ ಮತ್ತು ಅವನಿಗೆ ತೊಂದರೆ ಕೊಡಬಾರದು. ಅವರು ಮದುವೆಯಾಗಲಿ, ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವರು ಸೀದಾ ಹೂವಿನ ಹಾರ ಹಾಕಿಕೊಂಡು ಲಕ್ಷ್ಮೀಪುರಕ್ಕೆ ಬರಬೇಕು ಎಂಬುದಾಗಿ ಹೇಳಿದರು.