

ಮಡಿಕೇರಿ:
ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜು.೭ಕ್ಕೆ ತನ್ನ ಬಜೆಟ್ ಮಂಡಿಸುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿದು ಈ ಪೈಕಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ಈ ಹೊಸ ಸರ್ಕಾರದ ಬಜೆಟ್ ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.
ಕೊಡಗಿನಲ್ಲಿ ಸುಮಾರು ೨ ದಶಕಗಳ ಕಾಲ ಬಿಜೆಪಿ ಭದ್ರ ಕೋಟೆ ಇತ್ತು. ಇದನ್ನು ಇಬ್ಬರು ಯುವ ಮತ್ತು ವಿದ್ಯಾವಂತ ಶಾಸಕರು ಛಿದ್ರ ಮಾಡಿದ್ದು, ಕೊಡಗಿನಲ್ಲಿ ಮತ್ತೆ ಕಾಂಗ್ರೆಸ್ ಗತ ವೈಭವಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂದಿನ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ ಇದೇ ಹವಾ ಮುಂದುವರಿಯಬೇಕಾದರೆ ಸರ್ಕಾರದ ಸಹಕಾರವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಂಡಿಸುತ್ತಿರುವ ಈ ಬಜೆಟ್ ಮೇಲೆ ಜಿಲ್ಲೆಯಲ್ಲಿ ದೊಡ್ಡ ನಿರೀಕ್ಷೆಗಳು ಇವೆ.
ಕೃಷಿಪ್ರಧಾನ ಕೊಡಗಿನಲ್ಲಿ ಕಾಫಿ ಪ್ರಮುಖ ಬೆಳೆ. ಇದರ ಜತೆಯಲ್ಲಿ ಕರಿಮೆಣಸು, ಅಡಿಕೆಯನ್ನೂ ಬೆಳೆಯಲಾಗುತ್ತಿದೆ. ಒಂದೊಮ್ಮೆ ಭತ್ತದ ಕಣಜ ಎಂದು ಗುರುತಿಸಲಾಗಿದ್ದ ಜಿಲ್ಲೆಯಲ್ಲಿ ಈಗ ಭತ್ತ ಬೆಳೆಯುವ ಪ್ರದೇಶ ಕಡಿಮೆ ಆಗಿದೆ. ಕೊಡಗಿನೊಂದಿಗೆ ಗುರುತಿಸಿಕೊಂಡಿದ್ದ ಕಿತ್ತಳೆ, ಜೇನಿನ ಪರಿಮಳವೂ ಮೊದಲಿನಷ್ಟು ಇಲ್ಲ. ಹಾಗಾಗಿ ಕೃಷಿ ಕ್ಷೇತ್ರದ ಪುನರುಜ್ಜೀವನಕ್ಕೆ ಸಾಕಷ್ಟು ಕೊಡುಗೆಯ ನಿರೀಕ್ಷೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿದೆ. ಆದರೆ ಇಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎನ್ನುವುದು ಸಾಮಾನ್ಯ ಆರೋಪ. ಈ ಬಗ್ಗೆಯೂ ಬಜೆಟ್‌ನಲ್ಲಿ ಯೋಜನೆಯ ನಿರೀಕ್ಷೆ ಇದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಮಳೆಯಿಂದ ಹಾಳಾಗುವ ರಸ್ತೆಗಳಿಗೆ ಶಾಶ್ವತ ಪರಿಹಾರ, ಪ್ರವಾಹಪೀಡಿತರಿಗೆ ಶಾಶ್ವತ ಪರಿಹಾರ ಹೀಗೆ ನಿರೀಕ್ಷೆಗಳ ದೊಡ್ಡ ಪಟ್ಟಿಯೇ ಇದೆ. ಕ್ರೀಡಾವಿಶ್ವವಿದ್ಯಾಲಯ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಿನಿ ವಿಮಾನ ನಿಲ್ದಾಣದಂತಹ ಬೇಡಿಕೆಗಳೂ ಇವೆ. ಬಜೆಟ್‌ನಲ್ಲಿ ನೂತನ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದು ಸದ್ಯದ ಕುತೂಹಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಕೃಷಿಕರು ಆಶಾಭಾವನೆ ಇಟ್ಟುಕೊಂಡಿದ್ದಾರೆ. ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದು, ಸಣ್ಣ ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ವಿಶೇಷ ಯೋಜನೆಗಳನ್ನು ಕಲ್ಪಿಸಬೇಕು. ೧೦ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಮತ್ತು ವಿದ್ಯುತ್ ಬಾಕಿ ಬಿಲ್ ಮನ್ನಾ ಮಾಡುವುದಕ್ಕೆ ಹಣವನ್ನು ಮೀಸಲಿಡಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಲೂ ಪ್ರತಿವರ್ಷ ಕಾಫಿ ಫಸಲು ಹಾಳಾಗುತ್ತಿದೆ. ಈಗಾಗಲೇ ಕಾಫಿ ತೋಟಗಳು ರೋಗಪೀಡಿತವಾಗಿವೆ. ರೈತರು ಸಾಲಗಾರರಾಗಿದ್ದಾರೆ.