ಯುವ ಸಮೂಹ ಸೆಳೆಯುವುದೇ ಸವಾಲು

17MDK01
Published on

ಮಡಿಕೇರಿ:
ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣೆಯಿಂದ ಚುನಾವಣೆಗೆ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಳವಾಗುತ್ತಾ ಬಂದಿದೆ. ಆದರೆ ಬಹುತೇಕ ಬೂತ್‌ಗಳಲ್ಲಿ ಶೇ. ೬೦ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತ ಚಲಾಯಿಸಿರುವ ಯುವ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವುದೇ ದೊಡ್ಡ ಸವಾಲಾಗಿದೆ. ಕೊಡಗಿನಲ್ಲಿ ವಿದ್ಯಾವಂತ ಮತದಾರ ಸಂಖ್ಯೆಯೇ ಅಧಿಕವಾಗಿದ್ದು, ಮತದಾನದ ಮಹತ್ವದ ಬಗ್ಗೆ ಸಾಕಷ್ಟು ಅರಿವು ಹೊಂದಿದವರಾಗಿದ್ದಾರೆ. ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗ ಕಾಲ ಕಾಲಕ್ಕೆ ನಡೆಸುವ ಜಾಗೃತಿ ಕಾರ್ಯಕ್ರಮಗಳೂ ಇಲ್ಲಿನ ಮತದಾರರನ್ನು ಮತದಾನದ ಮಹತ್ವದ ವಿಷಯದಲ್ಲಿ ಹೆಚ್ಚಿನ ಸಾಕ್ಷರನ್ನಾಗಿಸಿದೆ. ಹಾಗಾಗಿಯೇ ಚುನಾವಣೆಯಿಂದ ಚುನಾವಣೆಗೆ ಕೊಡಗಿನಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗುತ್ತಾ ಬಂದಿದೆ. ೨೦೦೮ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ ೭೦.೧ರಷ್ಟು ಮತದಾನವಾಗಿದ್ದರೆ, ವಿರಾಜಪೇಟೆಯಲ್ಲಿ ಶೇ. ೬೦.೮ರಷ್ಟು ಮತ ಚಲಾವಣೆ ಆಗಿತ್ತು. ೨೦೧೩ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೬.೧ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಶೇ. ೭೧.೧ರಷ್ಟು ಮತದಾನವಾಗಿತ್ತು ೨೦೧೮ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೯.೮ ಮತ್ತು ವಿರಾಜಪಪೇಟೆ ಕ್ಷೇತ್ರದಲ್ಲಿ ಶೇ. ೭೪.೨ರಷ್ಟು ಪ್ರಮಾಣದಲ್ಲಿ ಮತದಾನ ಆಗಿತ್ತು. ಆದರೆ ಯುವ ಮತದಾರರ ಮತದಾನದ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಚುನಾವಣಾ ಆಯೋಗವನ್ನು ಚಿಂತಿಸುವಂತೆ ಮಾಡಿದೆ.
ಯುವ ಮತದಾರರು ಮತಗಟ್ಟೆಗಳ ಬಳಿ ಬಾರದಿರುವುದಕ್ಕೆ ಹಲವು ಕಾರಣಗಳು ಇರಬಹುದು ಎನ್ನುತ್ತಾರೆ ಅಧಿಕಾರಿಗಳು. ಸ್ವಂತ ಸ್ಥಳದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಉದ್ಯೋಗ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಪರ ಊರಿನಲ್ಲಿ ಇದ್ದರೆ ಅಂತಹವರು ಅನಿವಾರ್ಯ ಕಾರಣಗಳಿಂದ ಮತದಾನಕ್ಕೆ ಆಗಮಿಸದೇ ಇರಬಹುದು. ಇಂತಹವರ ಸಂಖ್ಯೆ ಯುವಕರೇ ಅಧಿಕ ಇರುವುದರಿಂದ ಯುವಜನತೆಯ ಮತದಾನ ಪ್ರಮಾಣ ಕಡಿಮೆ ಆಗುವಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯವಸ್ಥೆಯ ಬಗ್ಗೆ ಬೇಸತ್ತು ಮತ ಚಲಾಯಿಸದೇ ಉಳಿಯುವವರೂ ಇರುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಮಡಿಕೇರಿ ಕ್ಷೇತ್ರದ ೨೦ನ ಮತ್ತು ವಿರಾಜಪೇಟೆ ಕ್ಷೇತ್ರದ ೪೫ ಮತಗಟ್ಟೆಗಳಲ್ಲಿ ಯುವಕರ ಮತದಾನ ಪ್ರಮಾಣ ಕಡಿಮೆ ಇತ್ತು.

ಮತದಾನದ ಜಾಗೃತಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಆಯೋಜಿತವಾಗಿದೆ. ಏ೩೦ ರಂದು ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ರಂಗೋಲಿ ಸ್ಪರ್ಧೆ ಮತ್ತು ಮೊಬೈಲ್ ಲೈಟ್‌ನಲ್ಲಿ ನಾನು ಮತ ಹಾಕುವೆ ಎಂಬ ಅಭಿಯಾನವೂ ವಿಭಿನ್ನವಾಗಿ ನಡೆಯಲಿದೆ.
ಡಾ. ಎಸ್. ಆಕಾಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ವೀಪ್ ಸಮಿತಿನ ಅಧ್ಯಕ್ಷ

ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವ ಅಧಿಕಾರ ಸಿಕ್ಕಿರುವುದು ಒಂದು ಹೆಮ್ಮೆಯ ವಿಚಾರ. ಮೇ ೧೦ ಮತದಾನ ದಿನಕ್ಕಾಗಿ ಕಾತುರಳಾಗಿದ್ದೇನೆ. ಯುವ ಜನಾಂಗ ತಮ್ಮ ಹಕ್ಕು ಚಲಾಯಿಸಲು ಮುಂದಾಗಬೇಕು ಎನ್ನುವ ಅನ್ನಿಸಿಕೆ ನನ್ನದು. ನಾನಂತೂ ಮತದಾನ ಮಾಡುತ್ತೇನೆ. ನಾಗರಿಕರು ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು.
ಶವ್‌ನೀ ವಿ.ಶೆಟ್ಟಿ, ವಿದ್ಯಾರ್ಥಿನಿ, ಕುಶಾಲನಗರ.

ಪ್ರತಿ ಚುನಾವಣೆಯಲ್ಲಿ ಕಡಿಮೆ ಆಗುತ್ತಿರುವ ಯುವ ಮತದಾರರ ಮತದಾನದ ಪ್ರಮಾಣ ಮತ್ತು ಮತದಾನದ ಬಗ್ಗೆ ಯುವಜನತೆಗ ಆಸಕ್ತಿ ಕಡಿಮೆ ಆಗಲು ಕಾರಣ ಸ್ಥಳಿಯವಾಗಿ ಉದ್ಯೋಗ ಸಿಗದೆ ದೂರದೂರುಗಳಿಗೆ ಉದ್ಯೋಗಕ್ಕೆ ತೆರಳಿರುವ ಯುವಕರು. ಒಂದು ದಿನ ರಜೆ ಮಾಡಿ ಮತದಾನ ಮಾಡಲು ವಾಪಸ್ ಬರುವುದಿಲ್ಲ. ಚುನಾಯಿತ ಪ್ರತಿನಿಧಿಗಳು ಗ್ರಾಮಗಳ ಅಭಿವೃದ್ಧಿ ಮಾಡಬೇಕು. ಆದರೆ ಈ ಕೆಲಸ ಮಾಡುತ್ತಿಲ್ಲ. ಇದರಿಂದ ಯುವಜನತೆಗೆ ಬೇಸರವಾಗಿ ಮತದಾನ ಮಾಡಲು ದೂರದ ಊರಿಂದ ಬರುತ್ತಿಲ್ಲ.
ಅಕ್ಷಿತಾ, ಉದ್ಯೋಗಿ, ದುಂಡಳ್ಳಿ

ಮತದಾನದ ಬಗ್ಗೆ ಯುವಜನತೆಗ ಆಸಕ್ತಿ ಕಡಿಮೆ ಆಗಲು ಕಾರಣ ಜನಪ್ರತಿನಿಧಿಗಳು ಹೆಚ್ಚಿನದಾಗಿ ಸಾರ್ವಜನಿಕ ಸೇವೆ ಮಾಡದೆ ಇರುವುದು. ಹಾಗೂ ಉನ್ನತ ವ್ಯಾಸಂಗ ಮಾಡಿರುವಂತಹ ಯುವ ಜನತೆಗೆ ಯಾವುದೆ ಸರಿಯಾದ ಉದ್ಯೋಗ ಸಿಗದೆ ದೂರದೂರುಗಳಿಗೆ ತೆರಳಬೇಕಾಗಿರುವುದರಿಂದ ಯುವಜನತೆ ಮತದಾನ ಏಕೆ ಮಾಡಬೇಕು ಎಂಬ ಆಲೊಚನೆ ಬಂದಂತಿದೆ. ಸ್ಥಳಿಯವಾಗಿ ಕೈಗಾರಿಕಾ ಕೇಂದ್ರಗಳನ್ನು ತೆರೆದು ಇಲ್ಲೇ ಯುವ ಜನತೆಗೆ ಉದ್ಯೋಗ ನೀಡಿದರೆ ಒಂದಷ್ಟು ಮತದಾನದ ಪ್ರಮಾಣ ಹೆಚ್ಚಾಗಬಹುದು. ಇಲ್ಲವಾದಲ್ಲಿ ಮುಂದೆಯೂ ಇನ್ನಷ್ಟು ಮತದಾನ ಕಡಿಮೆಯಾಗುತ್ತದೆ.
ವಿಣಾ ಎಂ.ವಿ., ಖಾಸಗಿ ಕಂಪನಿ ಉದ್ಯೋಗಿ, ಮಾಲಂಬಿ.

ಯುವಕರಲ್ಲಿ ದೇಶಭಕ್ತಿ ಕಡಿಮೆ ಆಗಿದೆ. ಅವರು ಬಹುರಾಷ್ಟ್ರೀಯ ಕಂಪನಿಗಳಿಂದ ಡಾಲರ್‌ಗಳಲ್ಲಿ ಗಳಿಸುತ್ತಾರೆ. ೫೦ ರಿಂದ ೫೫ ಪ್ರತಿಶತಕ್ಕಿಂತ ಕಡಿಮೆ ಜನರು ಮಾತ್ರ ಮತ ಚಲಾಯಿಸುತ್ತಿದ್ದಾರೆ ಮತ್ತು ಸರಿಯಾದ ಬಹುಮತ ಬರುತ್ತಿಲ್ಲ. ಮತದಾನ ಮಾಡದವರಿಗೆ ಅವರ ಸವಲತ್ತುಗಳಿಗೆ ಕಡಿವಾಣ ಹಾಕಬೇಕು. ನಾಯಕತ್ವ ನಿಷ್ಠೆಯನ್ನು ಹೊಂದಿರಬೇಕು. ಅವರು ಪಕ್ಷ ಬದಲಾಯಿಸಬಾರದು. ಅವರ ವರ್ತನೆ ಯುವಕರನ್ನು ನಿರುತ್ಸಾಹಗೊಳಿಸುತ್ತಿದೆ
ಮುಕ್ಕಾಟಿರ ಎಂ. ವಿನಯ್, ಲಯನ್ಸ್ ವಲಯ ಅಧ್ಯಕ್ಷ, ನೆಲಜಿ

ಪ್ರಥಮವಾಗಿ ಮತದಾನ ಹಕ್ಕು ನನಗೆ ಸಿಕ್ಕಿದೆ. ಈ ಹುಮ್ಮನಸ್ಸು ಉಲ್ಲಾಸ ಇದೆ. ಮನೆಯ ಹಿರಿಯರು ಮತದಾನದ ಉತ್ಸಾಹದಲ್ಲಿ ಭಾಗವಹಿಸುತ್ತಿದ್ದರು. ಪೋಷಕರು, ಸಹೋದರರು, ಸಹೋದರಿಯರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿಕೊಂಡು ಬರುತ್ತಿದ್ದರು. ಈ ಬಾರಿ ನನಗೂ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಅತೀವ ಸಂತೋಷವಾಗಿದೆ. ದೇಶಕ್ಕೆ ಉತ್ತಮ ನಾಯಕರ ಆಯ್ಕೆಗಾಗಿ ನನ್ನ ಹಕ್ಕನ್ನು ಚಲಾಯಿಸುತ್ತೇನೆ
ನೇಹಾಮೇರಿ ಜೆಫ್ರಿ, ವಿದ್ಯಾರ್ಥಿ, ಸುಂಟಿಕೊಪ್ಪ

ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮ ಕರ್ತವ್ಯ. ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕರ್ತವ್ಯ ನಿರ್ವಹಿಸುವಲ್ಲೂ ಜವಾಬ್ದಾರಿ ತೋರಿಸಬೇಕು. ಮತದಾನದ ದಿನ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವುದನ್ನು ಮರೆಯಬಾರದು. ನಮ್ಮ ಒಂದೊಂದು ಮತವೂ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಲು ಸಹಕಾರಿ ಆಗುತ್ತದೆ.
ಬಿ.ಎಸ್. ವಿದ್ಯಾ ಪ್ರಭುದೇವ್, ಗೃಹಿಣಿ, ಕುಶಾಲನಗರ

ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕು. ಸಮರ್ಥ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು. ನಾಯಕನಿಗೆ ಇರಬೇಕಾದ ಕನಿಷ್ಠ ಮೌಲ್ಯವಿರುವವರನ್ನು ನಾಯಕನನ್ನಾಗಿ ಆಯ್ಕೆ ಮಾಡೋಣ.
ಉಜ್ವಲ್ ಹೆಚ್.ಆರ್., ವಿದ್ಯಾರ್ಥಿ, ಕುಶಾಲನಗರ.

ನನಗಿದು ಮತದಾನಕ್ಕೆ ಸಿಗುತ್ತಿರುವ ೨ನೇ ಅವಕಾಶ. ಖಂಡಿತವಾಗಿಯೂ ನಾನು ನನ್ನ ಹಕ್ಕು ಚಲಾಯಿಸುತ್ತೇನೆ. ನನ್ನ ಒಂದು ಮತದಿಂದ ಏನು ಮಹಾ ಆಗುತ್ತದೆ ಎನ್ನುವ ಭಾವನೆ ಬೇಡ. ಮತದಾನದ ದಿನ ಎಲ್ಲರೂ ಮತದಾನ ಮಾಡೋಣ. ಇದು ನಮ್ಮ ಜವಾಬ್ದಾರಿಯೂ ಹೌದು.
ಚಾಂದಿನಿ ಪೊರೆಯನ, ಖಾಸಗಿ ಸಂಸ್ಥೆ ಉದ್ಯೋಗಿ, ಕುಶಾಲನಗರ

ಮತದಾನದ ಮಾಡಿದರೆ ಅದರಿಂದ ಆಗುವ ಲಾಭ ನಷ್ಟಗಳ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸುವಲ್ಲಿ ವಿಫಲವಾಗಿದ್ದಾರೆ. ಮಾದ್ಯಮದಲ್ಲಿ ಹಾಗು ಇತರೆಡೆಗಳಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳನ್ನು ಕಂಡು ಮತದಾನದ ಬಗ್ಗೆ ಆಸಕ್ತಿ ಮೂಡದೆ ದೂರ ಉಳಿಯುವ ಸ್ಥಿತಿಗೆ ಬಂದಿದ್ದಾರೆ. ಯಾರು ಆರಿಸಿ ಬಂದರೆ ನಮಗೇನು ಎಂಬ ಭಾವನೆ ಮೂಡುತ್ತಿದೆ. ಇದು ಸರಿಯಲ್ಲ.
ಪಿ.ಸಿ ಕೋಯಲ್, ವಿದ್ಯಾರ್ಥಿನಿ, ವಿರಾಜಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net