ಮೇಗರವಳ್ಳಿಯಲ್ಲಿ ಬಿಜೆಪಿಗೆ ಲಾಟರಿ; ಬಿದರಗೋಡು ಗ್ರಾಪಂನಲ್ಲಿ ಪ್ರಕ್ರಿಯೆ ಸ್ಥಗಿತ; ನಾಲ್ಕು ಕಡೆ ಕಮಲ ಬೆಂಬಲಿತರಿಗೆ ಪಟ್ಟ

10 tth 05
ಕೋಣಂದೂರು ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು.
Published on

ತೀರ್ಥಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೇಗರವಳ್ಳಿಯಲ್ಲಿ ಬಿಜೆಪಿಗೆ ಲಾಟರಿ ಹೊಡೆದಿದ್ದು, ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಕೋಣಂದೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

8 ಸದಸ್ಯ ಬಲದ ಮೇಗರವಳ್ಳಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ದೇವೇಂದ್ರ ಹಾಗೂ ಕಾಂಗ್ರೆಸ್ ಬೆಂಬಲಿತ ಜೀನತ್ ರಫೀಕ್ ತಲಾ 4 ಮತ ಗಳಿಸಿದ್ದರು. ಲಿತಾಂಶ ನಿರ್ಣಯಿಸುವ ಸಲುವಾಗಿ ಹಾಕಿದ ಲಾಟರಿಯಲ್ಲಿ ಬಿಜೆಪಿ ಬೆಂಬಲಿತ ದೇವೇಂದ್ರ ಗೆಲುವು ಸಾಧಿಸಿದರು. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರತಿಮಾ ಪುಟ್ಟಪ್ಪ ಕಾಂಗ್ರೆಸ್‌ನ ಲಕ್ಷ್ಮೀ ಅವರನ್ನು 5-3 ಮತಗಳಿಂದ ಪರಾಭವಗೊಳಿಸಿದರು.
ಕೋಣಂದೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಬೆಂಬಲಿತ ಮಂಗಳ ಗೋಪಿ ಬಿಜೆಪಿ ಬೆಂಬಲಿತ ಗಾಯತ್ರಿ ಸುಧಾಕರ್ ಅವರನ್ನು ಪರಾಭವಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಸುಜಾತಾ ಚೂಡಾಮಣಿ ಅವಿರೋಧವಾಗಿ ಆಯ್ಕೆಯಾದರು. ತ್ರೃಯಂಬಕಪುರ ಗ್ರಾಪಂಗೆ ಅಧ್ಯಕ್ಷರಾಗಿ ಪತ್ರಕರ್ತ ಟಿ.ಜೆ.ಅನಿಲ್ ಕಾಂಗ್ರೆಸ್‌ನ ಹುಲ್ಲತ್ತಿ ದಿನೇಶ್ ಅವರನ್ನು 6-5 ಮತಗಳ ಅಂತರದಲ್ಲಿ ಪರಾಭವಗೊಳಿಸಿ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀದೇವಿ ಕಾಂಗ್ರೆಸ್ ಬೆಂಬಲಿತ ರೇಖಾ ಮಂಜುನಾಥ ಅವರನ್ನು ಸೋಲಿಸಿದ್ದಾರೆ.
ಬಿದರಗೋಡು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದರೆ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮೃತ್‌ರಾಜ್ ಬಾಳೇಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುಡ್ಡೇಕೊಪ್ಪ, ಹೊದಲ-ಅರಳಾಪುರ, ಹಣಗೆರೆ ಗ್ರಾಪಂಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಈ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ. ಗುಡ್ಡೆಕೊಪ್ಪ ಗ್ರಾಪಂಗೆ ರಾಘವೇಂದ್ರ ಪವಾರ್ ಅಧ್ಯಕ್ಷರಾಗಿ, ಜಯಾ ಪೂಜಾರಿ ಉಪಾಧ್ಯಕ್ಷರಾಗಿ, ಹೊದಲ-ಅರಳಾಪುರದಲ್ಲಿ ಅನಿತಾ ಅಧ್ಯಕ್ಷರಾಗಿ, ಕವಿತಾ ಉಪಾಧ್ಯಕ್ಷರಾಗಿ, ಹಣಗೆರೆ ಗ್ರಾಪಂಗೆ ಅಧ್ಯಕ್ಷರಾಗಿ ಕೆ.ಎನ್.ರಮೇಶ್, ಉಪಾಧ್ಯಕ್ಷರಾಗಿ ಸರೋಜಾ ಅವಿರೋಧ ಆಯ್ಕೆಯಾಗಿದ್ದಾರೆ. ಹೆಗ್ಗೋಡು ಗ್ರಾಪಂಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎಸ್.ಕಷ್ಣಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯಶೋದಾ ಸುಧಾಕರ್ ಚುನಾಯಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net