

ನರೇಂದ್ರ ಎಸ್.ಮರಸಣಿಗೆ
ಕಳೆದ ವರ್ಷ ಮೇ ತಿಂಗಳಿನಲ್ಲಿ ಬತ್ತಿ ಹೋಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟು ಈ ವರ್ಷ ಮೇ ತಿಂಗಳಿನಲ್ಲಿ ತುಂಬಿ ಸಮೃದ್ಧವಾಗಿ ತುಂಬಿದೆ. ಇದರಿಂದಾಗಿ ಹೆಬ್ರಿಗೆ ಇನ್ನು ಕೆಲವು ದಿನಗಳ ಕಾಲ ನೀರಿನ ಸಮಸ್ಯೆ ಇಲ್ಲ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೀರನ್ನು ಅವಲಂಬಿಸಿ ಹೆಬ್ರಿ, ಚಾರ, ಕುಚ್ಚೂರು ಹಾಗೂ ಶಿವಪುರ ಗ್ರಾಪಂಗಳು ಅವಲಂಬಿಸಿದ್ದವು. ನೀರಿನ ಸಮಸ್ಯೆಯಿಂದಾಗಿ ಹೆಬ್ರಿ ಪಂಚಾಯಿತಿ ಹೊರತುಪಡಿಸಿ ಬೇರೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.
ಹೆಬ್ರಿಯಲ್ಲಿ ಕೇವಲ ಒಂದು ದಿನ ಮಾತ್ರ ಮಳೆಯಾಗಿದೆ. ಆದರೆ ಘಟ್ಟದಲ್ಲಿ ನಿರಂತರವಾಗಿ ಮಳೆಯಾದ ಪರಿಣಾಮವಾಗಿ ಕಿಂಡಿ ಅಣೆಕಟ್ಟಿನಲ್ಲಿ ಜಲ ಸಮೃದ್ಧಿಯಾಗಿದೆ. ಹೆಬ್ರಿಯಲ್ಲಿ ಶೀಘ್ರ ಮಳೆಯಾದಲ್ಲಿ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ. ಕಳೆದ ವರ್ಷ ವಾರದಲ್ಲಿ ಒಂದು ದಿನ ಮಾತ್ರ ನದಿ ನೀರು ಕೃಷಿಗೆ ಹಾಯಿಸಲು ನಿಗದಿ ಮಾಡಲಾಗಿತ್ತು. ಪ್ರಸ್ತುತ ಸೀತಾನದಿಯಲ್ಲಿ ನೀರು ಸಮೃದ್ಧವಾಗಿರುವುದರಿಂದ ರೈತರು ಯಥೇಚ್ಛವಾಗಿ ಕೃಷಿಗೆ ನೀರು ಬಳಸಿಕೊಳ್ಳುತ್ತಿದ್ದಾರೆ.
ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಪಂನಲ್ಲಿ ಮಾತ್ರ ಕೆಲವು 10-15 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿದೆ. ಮತ್ತೆಲ್ಲೆಡೆ ನೀರಿನ ಅಭಾವ ಕಂಡು ಬಂದಿಲ್ಲ. ಒಂದು ವೇಳೆ ಸೂಕ್ತ ಸಮಯದಲ್ಲಿ ಮಳೆಯಾಗದಿದ್ದಲ್ಲಿ ಮಾತ್ರ ನೀರಿನ ಸಮಸ್ಯೆ ತಲೆದೋರುತ್ತದೆ.
ಕಿಂಡಿ ಅಣೆಕಟ್ಟಿನ ಅಲ್ಲಲ್ಲಿ ಕಬ್ಬಿಣದ ರಾಡ್ಗಳು ಹೊರಗೆ ಗೋಚರಿಸುತ್ತದೆ. ಸಣ್ಣ ಪ್ರಮಾಣದಲ್ಲಿ ಸೋರಿಕೆ ಇದೆ. ತಾತ್ಕಾಲಿಕವಾಗಿ ಶೇಡಿ ಮಣ್ಣು ಬಳಸಿ ಬೃಹತ್ ಪ್ರಮಾಣದಲ್ಲಿ ನೀರು ಸೋರುವುದನ್ನು ತಡೆಯಲಾಗಿದೆ. ಸಕಾಲದಲ್ಲಿ ದುರಸ್ತಿಗೊಳಿಸಿ ವ್ಯವಸ್ಥಿತ ಗೇಟ್ಗಳ ಅಳವಡಿಕೆ ಮಾಡಬೇಕಾಗಿದೆ.
ಚಾರ ನವೋದಯದ ಬಳಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಸೀತಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಇದರಲ್ಲಿ ಯಥೇಚ್ಛವಾಗಿ ನೀರು ಶೇಖರಣೆಯಾಗುವುದರಿಂದ ಮುಂದಿನ ದಿನಗಳಲ್ಲಿ ಹೆಬ್ರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.
ನೀರು ಕಲುಷಿತವಾಗದಿರಲಿ
ಸದ್ಯಕ್ಕೆ ಜನರು ನದಿಯ ದಡದಲ್ಲಿ, ಕಲ್ಲುಗಳಲ್ಲಿ ಬಂದು ಬಟ್ಟೆ ಒಗೆಯುತ್ತಿದ್ದಾರೆ. ಜನರು ಇದನ್ನು ಕುಡಿಯಲು ಬಳಸುವುದರಿಂದ ಸ್ವಚ್ಛತೆ ಅತಿ ಅಗತ್ಯವಾಗಿದೆ. ಮಳೆಗಾಲ ಸಂದರ್ಭ ಸೀತಾ ನದಿಗೆ ಕಾರ್ಖಾನೆಗಳಿಂದ ಬೂದಿ ಬರುವುದನ್ನು ತಪ್ಪಿಸಬೇಕು.
ಕಳೆದ ವರ್ಷ ನೀರಿನ ಸಮಸ್ಯೆ ನಮ್ಮನ್ನು ಕಾಡಿತ್ತು. ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟಿನಲ್ಲಿ ನೀರು ಯಥೇಚ್ಛವಾಗಿ ಶೇಖರಣೆಯಾಗಿದೆ. ಸದ್ಯಕ್ಕೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಪಂನಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಶೀಘ್ರದಲ್ಲಿ ಮಳೆಯಾದಲ್ಲಿ ಮತ್ತೆ ನೀರಿನ ಸಮಸ್ಯೆ ಬರುವುದಿಲ್ಲ.ಶಶಿಧರ್ ಕೆ.ಜೆ., ಇಒ, ಹೆಬ್ರಿ ತಾಪಂ