ಬಾವಿ ಕೆಲಸಕ್ಕಿಳಿದವ ಉಸಿರುಗಟ್ಟಿ ಸಾವು

well
Published on

ಹೆಬ್ರಿ: ಕಾರ್ಕಳ ತಾಲೂಕಿನ ನೀರೆ ಗ್ರಾಮದ ಪಂಚಾಯಿತಿ ಬಳಿ ನಿರ್ಮಾಣ ಹಂತದಲ್ಲಿರುವ ಮನೆ ಸಮೀಪದ ಬಾವಿಯ ಹೂಳು ತೆಗೆಯಲು ಬಾವಿಗಿಳಿದಿದ್ದ ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿಕಂಠ (24) ಎಂಬುವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮಣಿಕಂಠ ಬಾವಿಗಿಳಿದು ಕೆಲಸ ಮಾಡಲು ಪ್ರಾರಂಭಿಸುವಷ್ಟರಲ್ಲಿ ಆಮ್ಲಜನಕ ಕೊರತೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ರಕ್ಷಿಸಲು ಬಾವಿಗಿಳಿದ ಗಿರೀಶ್ ಮತ್ತು ನಜೀರ್ ಸಾಹೇಬ್ ಕೂಡ ಅಸ್ವಸ್ಥಗೊಂಡರು. ಕೂಡಲೇ ಸುಜೀತ್ ಎಂಬುವರು ಮೂವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದು, ಮಣಿಕಂಠ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಾವಿ ಕೆಲಸದ ಸಮಯದಲ್ಲಿ ಸುರಕ್ಷತಾ ಕ್ರಮ ಅಳವಡಿಸದೆ ಬಾವಿಗಿಳಿಸಿದ್ದ ಗುತ್ತಿಗೆದಾರ ನಾಗರಾಜ ಮತ್ತು ಮನೆ ಮಾಲೀಕ ಅಚ್ಯುತ ನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net