ರಾಜ್ಯಕ್ಕೆ ಗೇರು ಆಮದಿನಿಂದ ನಷ್ಟ, ಗೇರು ಕೃಷಿ ಮೇಳದಲ್ಲಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಅಭಿಪ್ರಾಯ

Cashew mela
Published on

ಉಳ್ಳಾಲ: ಗೇರು ಕೃಷಿ ವಿದೇಶಿ ಆದಾಯ, ಉದ್ಯೋಗ ನೀಡುವ ತಾಣವಾಗಿ ಬೆಳೆದಿದ್ದು, ರಾಜ್ಯದಲ್ಲಿ ಮೂರು ಲಕ್ಷ ಮೆಟ್ರಿಕ್ ಟನ್ ಗೇರಿನ ಅವಶ್ಯಕತೆ ಇದ್ದರೂ, ನಮ್ಮಲ್ಲಿ ಕೇವಲ 50 ಸಾವಿರ ಟನ್ ಮಾತ್ರ ಬೆಳೆಯಲಾಗುತ್ತಿದೆ. ಎರಡೂವರೆ ಲಕ್ಷ ಟನ್ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಅಭಿಪ್ರಾಯಪಟ್ಟರು.

ಉಳ್ಳಾಲದಲ್ಲಿ ರಾಜ್ಯ ಗೇರು ಕೃಷಿ ಮೇಳ-2021 ಮತ್ತು ವಿಚಾರ ಸಂಕಿರಣದ ಸಭಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಗೇರು ಕೃಷಿಯಲ್ಲಿ ಸ್ವಾವಲಂಬಿಗಳಾಗಲು ಪ್ರಯತ್ನ ಅಗತ್ಯ. ನಮ್ಮದು ಕೃಷಿ ಪ್ರಧಾನ ದೇಶವೆಂದು ಹೇಳಲಾಗುತ್ತಿದ್ದರೂ ಪ್ರೋತ್ಸಾಹದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೇವಲ ಸರ್ಕಾರವನ್ನು ಕಾಯುತ್ತಾ ಕೂರದೆ ಸರ್ಕಾರೇತರ ಸಂಸ್ಥೆಗಳನ್ನು ಆಶ್ರಯಿಸುವುದು ಮುಖ್ಯ ಎಂದರು.

ಕೈಪಿಡಿ ಬಿಡುಗಡೆಗೊಳಿಸಿದ ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾಧ್ಯಕ್ಷ ಧನಕೀರ್ತಿ ಬಲಿಪ ಮಾತನಾಡಿ, ಹಿಂದಿನ ಕಾಲದಲ್ಲಿ ಗೇರು ಕೃಷಿ ಮಕ್ಕಳ ಶಾಲಾ ಖರ್ಚಿಗೆಂದು ಬೆಳೆಯಲಾಗುತ್ತಿದ್ದರೆ, ಇಂದು ಅಂತಾರಾಷ್ಟ್ರೀಯ ಬೆಳೆಯಾಗಿ ಮಾರ್ಪಟ್ಟು ದೊಡ್ಡ ಉದ್ಯಮವಾಗಿದೆ ಎಂದರು.

ವಿಚಾರ ಸಂಕಿರಣದಲ್ಲಿ ಡಾ.ಡಿ.ಬಾಲಸುಬ್ರಮಣ್ಯನ್, ವಿ.ಆರ್.ವಿನೋದ್, ಡಾ.ಜಯಪ್ರಕಾಶ್ ಎಸ್.ಎಂ., ಡಾ.ಶಂಕರ್ ಎಂ., ಡಾ.ಎಚ್.ಎಸ್.ಚೈತನ್ಯ, ರಂಗನಾಥ ಟಿ.ಆರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಶಿವಮೊಗ್ಗ ಕೃಷಿ, ತೋಟಗಾರಿಕಾ ವಿವಿ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಸೀತಾ ಎಂ.ಸಿ., ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಮೀನುಗಾರಿಕಾ ಕಾಲೇಜು ಡೀನ್ ಡಾ.ಎ.ಸೆಂಥಿಲ್ವೇಲ್, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಹಿರಿಯ ವಿಜ್ಞಾನಿ ಡಾ.ಟಿ.ಜೆ.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಡಾ.ರವಿರಾಜ್ ಶೆಟ್ಟಿ ಜಿ. ಸ್ವಾಗತಿಸಿದರು. ಡಾ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ವಿ.ಸುಧೀರ್ ಕಾಮತ್ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ಉಳ್ಳಾಲ, ದ.ಕ ಜಿಲ್ಲೆ ಹಾಗೂ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೊಚ್ಚಿನ್ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಗೇರು ಉತ್ಪಾದಕರ ಸಂಘ, ಜಿಲ್ಲಾ ತೋಟಗಾರಿಕಾ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ, ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಾಧಕರಿಗೆ ಸನ್ಮಾನ: ಪ್ರಗತಿಪರ ಗೇರು ಕೃಷಿಕರಾದ ಪುತ್ತೂರಿನ ದೇರ್ಲ ಕರುಣಾಕರ ರೈ, ಈಶ್ವರಮಂಗಲದ ನಟೇಶ್ ಎಂ., ರಾಜವರ್ಮ ಬೈಲಂಗಡಿ, ವೇಣೂರಿನ ಮಹೇಶ್ ಯು.ಎಸ್., ತಾರಸಿ ತೋಟಗಾರಿಕೆ ತಜ್ಞ ಬ್ಲಾನಿ ಬಿ.ಡಿಸೋಜ ಮಾರ್ನಮಿಕಟ್ಟೆ ಇವರನ್ನು ಸನ್ಮಾನಿಸಲಾಯಿತು.

ಮೂರು ವರ್ಷಗಳ ಬಳಿಕ ಮೇಳ: ಉತ್ತಮ ಫಸಲು ಬಂದ ಸಂದರ್ಭ ಪ್ರತಿವರ್ಷ ನಡೆಯುತ್ತಿದ್ದ ಗೇರು ಕೃಷಿ ಮೇಳ 2018ರ ಬಳಿಕ ನಡೆದಿರಲಿಲ್ಲ, ಈ ಎರಡು ವರ್ಷಗಳಲ್ಲಿ ಫಸಲು ಇಲ್ಲದ ಕಾರಣ ಮೇಳಕ್ಕೆ ಕತ್ತಲು ಕವಿದಿತ್ತು. ಕಳೆದ ವರ್ಷ ಕರೊನಾ ನೆಪ ಇತ್ತು. ಹೀಗೆ ಮೂರು ವರ್ಷಗಳ ಬಳಿಕ ಹೊಸ ನಿರ್ದೇಶಕರು ಬಂದ ಬಳಿಕ ಮೇಳ ನಡೆದಿದೆ. ಈ ಮೂರು ವರ್ಷಗಳಲ್ಲಿ ಜನರು ಕೇಂದ್ರವನ್ನೇ ಮರೆತಂತಿದ್ದು, ಈ ಮೇಳದಲ್ಲಿ ಒಂದೆರಡು ವಸ್ತು ಪ್ರದರ್ಶನ ಮಳಿಗೆಗಳು ಮಾತ್ರ ಭಾಗಿಯಾಗಿದ್ದು ಸಾಕ್ಷಿಯಾಯಿತು.

ರಬ್ಬರ್ ಬೆಳೆ ಒಂದಲ್ಲ ಒಂದು ದಿನ ಬೀಳುತ್ತದೆ. ಗೇರು ಬಂಗಾರವಾಗಿದ್ದು, ಇದು ನಂಬಿದವರನ್ನು ಕೈಬಿಟ್ಟಿಲ್ಲ. ಮಟ್ಟುಗುಲ್ಲ, ಶಂಕರಪುರ ಮಲ್ಲಿಗೆ, ಪೊಳಲಿ ಕಲ್ಲಂಗಡಿಯಂತೆ ಹರೇಕಳ ಮೆಣಸು ವಿಶಿಷ್ಟ ಬೆಳೆಯಾಗಿದ್ದು, ಇದರ ಬಗ್ಗೆಯೂ ಸಂಶೋಧನೆ ನಡೆಸಲು ವಿಜ್ಞಾನಿಗಳು ಮುಂದಾಗಬೇಕು. ಕಂಕನಾಡಿ ಕಜೆ ಅಕ್ಕಿಗೂ ಮಂಗಳೂರಿನಲ್ಲಿ ಕೇಂದ್ರ ನಿರ್ಮಿಸಬೇಕು. ಮನೋಹರ್ ಶೆಟ್ಟಿ, ರೈತಸಂಘ (ಹಸಿರುಸೇನೆ) ರಾಜ್ಯ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net