

ಚಿಕ್ಕಬಳ್ಳಾಪುರ: ಹೆದ್ದಾರಿ ಬದಿಯ ಚರಂಡಿ ನಿರ್ಮಾಣ ಕಾಮಗಾರಿಗೆ ನೆಲ ಅಗೆದು ಎರಡು ತಿಂಗಳಾಗಿದೆ. ಆದರೆ, ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ಇದರ ನಡುವೆ ಗ್ರಾಹಕರು ಬಾರದೇ ವಹಿವಾಟು ಸ್ಥಗಿತಗೊಂಡಿದ್ದು ಸಂಪಾದನೆ ಇಲ್ಲದೇ ಕಟ್ಟಡ ಬಾಡಿಗೆ ಕಟ್ಟಲು ಆಗುತ್ತಿಲ್ಲ.
ಇದು ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಕಿರಿಕಿರಿ ಜತೆಗೆ ನಷ್ಟ ಅನುಭವಿಸುತ್ತಿರುವ ವ್ಯಾಪಾರಿಗಳ ಅಳಲು. ಅತ್ತ ಕಟ್ಟಡದಿಂದ ಬಿಟ್ಟು ಹೋಗಲು ಸಾಧ್ಯವಾಗುತ್ತಿಲ್ಲ. ಇತ್ತ ಮಳಿಗೆಯಲ್ಲಿ ವ್ಯಾಪಾರವೂ ಮಂಕಾಗಿದೆ ಎಂಬುದಾಗಿ ಬೇಸರ ವ್ಯಕ್ತಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 69 ರ ವಿಸ್ತರಣೆ ಕಾರ್ಯಕ್ರಮವು ಜನರ ನಿರೀಕ್ಷೆಯಂತೆ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದೆ. ಇದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು ಸ್ಥಳೀಯ ಜನರು ತೊಂದರೆ ಅನುಭವಿಸುವಂತಾಗಿದೆ. ಆದರೂ ಸಂಬ0ಧ ಪಟ್ಟ ಅಧಿಕಾರಿಗಳು ಪರಿಹಾರ ಕೆಲಸದ ಕಡೆಗೆ ಗಮನಹರಿಸಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ.
*ಸಮಸ್ಯೆಯ ಅಳಲೇನು*
ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಎಂ.ಜಿ.ರಸ್ತೆ ಮಾರ್ಗವಾಗಿ ಹೆದ್ದಾರಿ ವಿಸ್ತರಣೆಯ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಮೊದಲ ಹಂತವಾಗಿ ನಿಗದಿತ ಜಾಗದಲ್ಲಿ ಅಡ್ಡಲಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಹಾಗೆಯೇ ಚರಂಡಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಜೆಸಿಬಿ ಮೂಲಕ ರಸ್ತೆಯ ಬದಿಯಲ್ಲಿ ಅಗೆದು ಗುಂಡಿಯನ್ನು ಹಾಗೆಯೇ ಬಿಡಲಾಗಿದೆ. ಅಲ್ಲಲ್ಲಿ ಮಾತ್ರ ಚರಂಡಿಗೆ ಕಾಂಕ್ರೀಟ್ ಹಾಕಲಾಗಿದೆ. ಇದರ ಅರ್ಧಂಬರ್ಧ ಕಾಮಗಾರಿಗೆ ರಸ್ತೆ ಬದಿಯಲ್ಲಿನ ಅಂಗಡಿ, ಹೋಟೆಲ್, ರಸಗೊಬ್ಬರ, ದಿನಸಿ ಮಾರಾಟ ಸೇರಿದಂತೆ ವಿವಿಧ ವಾಣಿಜ್ಯಾತ್ಮಕ ಮಳಿಗೆಯಲ್ಲಿ ವಹಿವಾಟು ನಡೆಯುತ್ತಿಲ್ಲ. ಅಡ್ಡಲಾಗಿರುವ ಗುಂಡಿಯನ್ನು ದಾಟಿ ಅಂಗಡಿಗಳಿಗೆ ಹೋಗಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
*ಬಾಡಿಗೆ ಪಾವತಿಸಲು ಪರದಾಟ*
ಪ್ರಮುಖ ಹೆದ್ದಾರಿಯಾಗಿರುವುದರಿಂದ ರಸ್ತೆ ಬದಿಯಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ ದರವು ಮೊದಲಿನಿಂದಲೂ ದುಬಾರಿಯಾಗಿದೆ. ಇಲ್ಲಿ ಅನೇಕರು ಬ್ಯಾಂಕು, ಖಾಸಗಿ ಲೇವಾದೇವಿದಾರ ಸಂಸ್ಥೆಗಳಿ0ದ ಬಡ್ಡಿಗೆ ಸಾಲವನ್ನು ಪಡೆದುಕೊಂಡು ಬಂಡವಾಳ ಹೂಡಿದ್ದಾರೆ. ರಸ್ತೆ ವಿಸ್ತರಣೆಗೆ ಕಟ್ಟಡ ಜಾಗವನ್ನು ಕಳೆದುಕೊಂಡು ಮಾಲೀಕರು ನಷ್ಟ ಅನುಭವಿಸಿದರೆ, ಮಳಿಗೆಗಳ ಬಾಡಿಗೆದಾರರು ಆದಾಯವಿಲ್ಲದೇ ಬಾಡಿಗೆ ಪಾವತಿಸಲು, ಸಾಲವನ್ನು ತೀರಿಸಲು ಪರದಾಡುತ್ತಿದ್ದಾರೆ. ಅನವಶ್ಯಕ ನಿರ್ವಹಣೆ ವೆಚ್ಚದ ಹೊರೆಯು ಬೀಳುತ್ತಿರುವುದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದು ತ್ವರಿತ ಸಮಸ್ಯೆ ಪರಿಹಾರಕ್ಕೆ ಎದುರು ನೋಡುತ್ತಿದ್ದಾರೆ.