

ಕೊಪ್ಪ : ನಷ್ಟದಲ್ಲಿದ್ದ ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ 1.04 ಕೋಟಿ ರೂ.ಲಾಭಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹೆಚ್.ಎಸ್ ಇನೇಶ್ ತಿಳಿಸಿದರು.
ಕಳೆದ ಐದು ವರ್ಷದ ಹಿಂದೆ ಈ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿನಲ್ಲಿ ಬ್ಯಾಂಕ್ ಸುಮಾರು ಒಂಭತ್ತು ಕೋಟಿ ರೂ.ನಷ್ಟ ಹೊಂದಿತ್ತು. ಶೇ.88.06 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಎಂದು ಶುಕ್ರವಾರ ಸುದ್ದಿಗೋಷ್ಠಿ ತಿಳಿಸಿದರು.
ಬ್ಯಾಂಕ್‌ಉತ್ತಮ ವಸೂಲಾತಿ ಮಾಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಉತ್ತಮ ಬ್ಯಾಂಕ್ ಎಂದು ಕರೆಸಿಕೊಂಡಿದೆ. ಈ ಹಿಂದೆ ನರ್ಬಾಡ್‌ಗಳಲ್ಲಿ ಬ್ಯಾಂಕ್ ಸುಸ್ತಿಯಲ್ಲಿ ಇತ್ತು, ಬ್ಯಾಂಕ್ ಲಾಭಕ್ಕೆ ಬಂದಿರುವ ಕಾರಣ ನರ್ಬಾಡ್‌ನಲ್ಲಿ ಕೂಡ ಸಾಲ ನೀಡಲು ಮುಂದಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. 1930ರಲ್ಲಿ ಕೊಪ್ಪದಲ್ಲಿ ಹೊಸಕೊಪ್ಪ ಕೃಷ್ಣರಾಯರು ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಬ್ಯಾಂಕ್ ಸ್ಥಾಪಿಸಿದ್ದರು. ಅವರ ಉದ್ದೇಶಗಳು ಈಗ ಈಡೇರುತ್ತಿದೆ ಎಂದರು.
ಶಾಸಕ ಟಿ.ಡಿ ರಾಜೇಗೌಡರ ಅವರ ಶಾಸಕರ ನಿಧಿಯಿಂದ 10 ಲಕ್ಷ ರೂ.ಹಾಗೂ ಕೆಆರ್‌ಡಿಎಲ್‌ನಿಂದ 20 ಲಕ್ಷ ರೂ.ನಿಧಿಯನ್ನು ನೂತನ ಕಟ್ಟಡ ನಿರ್ಮಾಣಕ್ಕೆ ಒದಗಿಸಿಕೊಟ್ಟಿದ್ದಾರೆ. ಹಾಗೂ ನೂತನ ಕಟ್ಟಡಕ್ಕೆ ಬ್ಯಾಂಕ್‌ನ ಹಿಂದಿನ ಅಧ್ಯಕ್ಷರು, ರೈತರು ಮತ್ತು ಶೃಂಗೇರಿ ಶ್ರೀಮಠ ಸಹಕಾರ ನೀಡಿದೆ. ಸೆ.22ರಂದು ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಾಗೂ ಪುರಭವನದಲ್ಲಿ ಉದ್ಘಾಟನಾ ಸಮಾರಂಭ ಮತ್ತು ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಉಪಾಧ್ಯಕ್ಷ ಹರೀಶ್ ಭಂಡಾರಿ, ನಿರ್ದೇಶಕರಾದ ಸಾಯಿನಾಥ್, ಶ್ರೀನಿವಾಸ್ ಕೋಡ್ರು, ಎನ್.ಎಲ್ ನಾಗೇಶ್, ನಾರಾಯಣ ಪೂಜಾರಿ, ಬಡಿಯಣ್ಣ, ಜೆ.ಎಂ ಶ್ರೀಹರ್ಷ, ವ್ಯವಸ್ಥಾಪಕರಾದ ಅನಂತನಾಯ್ಕ ಟಿ ಮುಂತಾದವರಿದ್ದರು.