ಲಾರಿ ಚಾಲಕರ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

20230927_130522
Published on

ಉಡುಪಿ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಉದ್ಯಮದಲ್ಲಿ 5,000ಕ್ಕೂ ಮಿಕ್ಕಿ ಲಾರಿಗಳು ತೊಡಗಿಸಿಕೊಂಡಿವೆ. ಲಾರಿ ಡ್ರೈವರ್​, ಕ್ಲಿನರ್​ ಕೆಲಸಗಾರರು ಸೇರಿದಂತೆ ಸುಮಾರು 30,000 ಕುಟುಂಬಕ್ಕೆ ಮರಳುಗಾರಿಕೆ ಜೀವನಾಧಾರ. ಇತ್ತೀಚೆಗೆ ಪೊಲೀಸರು ಜಲ್ಲಿಕಲ್ಲು, ಕೆಂಪುಮಣ್ಣು ಸಾಗಿಸುವವರನ್ನು ತಡೆದು ನಿಲ್ಲಿಸಿ ದಂಡ ಹಾಕುತ್ತಿದ್ದಾರೆ. ಹೀಗಾಗಿ ಲಾರಿ ಚಾಲಕರು ಪ್ರತಿಭಟನೆಗೆ ಇಳಿದಿದ್ದಾರೆ. 3&4 ದಿನದಲ್ಲಿ ಲಾರಿ ಚಾಲಕರ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ವಿಧಾನ ಪರಿಷತ್​ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಗೆ ಪ್ರತಿ ವರ್ಷ 7.86 ಲಕ್ಷ ಮೆಟ್ರಿಕ್​ ಟನ್​ ಮರಳು ಅಗತ್ಯವಿದೆ. ಕರಾವಳಿ ನಿಯಂತ್ರಣ ವಲಯವನ್ನು ಹೊರತುಪಡಿಸಿ, ನಾನ್​ ಸಿ.ಆರ್​.ಝಡ್​ ವಲಯದಲ್ಲಿ ಈಗಾಗಲೇ 39 ಬ್ಲಾಕ್​ ಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಹೀಗೆ ಗುರುತಿಸಿದ ಬ್ಲಾಕ್​ನಲ್ಲಿ 7,57,750 ಮೆಟ್ರಿಕ್​ ಟನ್​ ಮರಳಿದೆ. ಕುಂದಾಪುರ ತಾಲ್ಲೂಕಿನ ಬಳ್ಳೂರಿನಲ್ಲಿ 2, ಅಂಪಾರಿನಲ್ಲಿ 1, ಒಟ್ಟು 3 ಪ್ರದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ ಮರಳು ತೆಗೆಯುವುದನ್ನು ವಹಿಸಿಕೊಡಲಾಗಿದೆ. ಒಟ್ಟು 96,220 ಮೆಟ್ರಿಕ್​ ಟನ್​ ಮರಳು ಇದೆಯೆಂದು ಗುರುತಿಸಲಾಗಿದೆ. ಇದರಲ್ಲಿ ಕೇವಲ 8,750 ಮೆಟ್ರಿಕ್​ ಟನ್​ ಮರಳನ್ನು ಮಾತ್ರ ತೆಗೆಯಲಾಗಿದೆ. ಪ್ರಸ್ತುತ ಹಸಿರು ನ್ಯಾಯಾಧೀಕರಣದ ತಡೆಯಿರುವುದರಿಂದ ಮರಳನ್ನು ತೆಗೆಯುತ್ತಿಲ್ಲ. ಜಿಲ್ಲಾ ವ್ಯಾಪ್ತಿಯ ವಲಯ-1, 2, 3 ಶ್ರೇಣಿಯ ಹಳ್ಳ, ತೊರೆಗಳಲ್ಲಿ 77 ಮರಳು ಬ್ಲಾಕ್​ಗಳಲ್ಲಿ 32 ಬ್ಲಾಕ್​ಗಳ ಅವಧಿ ಮುಕ್ತಾಯಗೊಂಡಿರುತ್ತದೆ. ಈ ಬ್ಲಾಕ್​ಗಳಲ್ಲಿ ಒಟ್ಟು 64,746 ಮೆಟ್ರಿಕ್​ ಟನ್​ ಮರಳು ಗುರುತಿಸಲಾಗಿದ್ದು, ಇದರಲ್ಲಿ 1,110 ಮೆಟ್ರಿಕ್​ ಟನ್​ ಮಾತ್ರ ಮರಳು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ನಾನ್​ ಸಿಅರ್​ಝಡ್​ ಪ್ರದೇಶದಲ್ಲಿ ಮರಳು ತೆಗೆಯಲು ಯಾವುದೇ ಸಮಸ್ಯೆ ಇರಲಿಲ್ಲ. ಸರ್ಕಾರ ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡದಂತೆ ರ್ನಿಬಂಧಿಸಿ ಮರಳುಗಾರಿಕೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಕಾವೇರಿ ಜಲನಿರ್ವಹಣೆಯಲ್ಲಿ ವಿಫಲ
ಸಿಎಂ ಮತ್ತು ಡಿಸಿಎಂ ಮಧ್ಯೆ ವಿಶ್ವಾಸದ ಕೊರತೆಯಿಂದ ರಾಜ್ಯ ಸರ್ಕಾರ ಕಾವೇರಿ ಜಲನಿರ್ವಹಣೆಯಲ್ಲಿ ವಿಪಲವಾಗಿದೆ. ಕಾವೇರಿ ನೀರು ಕೈತಪುವ ಭಿತಿ ಎದುರಾಗಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇರುವುದನ್ನು ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ತಜ್ಞರ ತಂಡ ರಚಿಸಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಗುರುರಾಜ್​ ಗಂಟಿಹೊಳಿ, ಕಿರಣ್​ ಕುಮಾರ್​ ಕೊಡ್ಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net