

ಸುಳ್ಯ: ಸಂಪಾಜೆಯ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ಸಂಭವಿಸಿದ್ದ ಕಾರು - ಟಿಪ್ಪರ್ ನಡುವಣ ಅಪಘಾತದಲ್ಲಿ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ, ಅಪರಾಧಿ ಟಿಪ್ಪರ್ ಚಾಲಕ ಹಾಗೂ ಮಾಲೀಕನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು ನೀಡಿದ್ದಾರೆ.
2015ರ ಫೆ.18ರಂದು ಮರಳು ತುಂಬಿದ ಟಿಪ್ಪರ್ ವಾಹನ, ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಪಂಜದ ಸಾಮಾಜಿಕ ಧುರೀಣ ಲಕ್ಷ್ಮೀನಾರಾಯಣ ಭೀಮಗುಳಿ, ಅವರ ಪುತ್ರ ಜೇಸಿಐ ಪೂರ್ವಾಧ್ಯಕ್ಷ ಅವಿನಾಶ್ ಭೀಮಗುಳಿ ಸಹಿತ ನಾಲ್ವರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಟಿಪ್ಪರ್ ಚಾಲಕ ಬೆಳ್ತಂಗಡಿ ಮೂಲದ ಇಸ್ಮಾಯಿಲ್ ಹಾಗೂ ಮಾಲೀಕ ಮಹಮ್ಮದ್ ರಫೀಕ್ ವಿರುದ್ಧದ ಆರೋಪ ಸಾಬೀತಾಗಿದ್ದು, ಇಬ್ಬರಿಗೂ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ 3000 ರೂ ದಂಡ ವಿಧಿಸಲಾಗಿದೆ.
ಘಟನೆ ವಿವರ: ಟಿಪ್ಪರ್ ಚಾಲಕ ಇಸ್ಮಾಯಿಲ್ ಎಂಬಾತ ಮಂಗಳೂರು ಮೂಲದ ರಫೀಕ್ ಎಂಬುವರ ಟಿಪ್ಪರ್‌ನಲ್ಲಿ ಪರವಾನಗಿ ರಹಿತವಾಗಿ ಮಂಗಳೂರಿನ ಅಡ್ಯಾರ್ ಬಳಿ ಶೇಖರಿಸಿಟ್ಟಿದ್ದ ಮರಳನ್ನು 2015ರ ಫೆ. 18ರಂದು ಮಾಣಿ- ಮೈಸೂರು ಹೆದ್ದಾರಿ ಮೂಲಕ ಮಡಿಕೇರಿಗೆ ಸಾಗಿಸುತ್ತಿದ್ದಾಗ ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ಅವಿನಾಶ್ ಭೀಮಗುಳಿ ಕುಟುಂಬವಿದ್ದ ಕಾರಿಗೆ ಸಂಪಾಜೆಯ ಕಡೆಪಾಲ ಎಂಬಲ್ಲಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಚಾಲಕ ಅವಿನಾಶ್ ಭೀಮಗುಳಿ, ಕಾರಲ್ಲಿದ್ದ ಅವಿನಾಶ್ ತಂದೆ ಲಕ್ಷ್ಮೀನಾರಾಯಣ ಭೀಮಗುಳಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ತಾಯಿ ಚೆನ್ನಮ್ಮ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹಾಗೂ ಪುತ್ರ ಅಭಿನಂದನ್ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಭವ್ಯ ಎಂಬುವರಿಗೂ ಗಂಭೀರ ಗಾಯಗಳಾಗಿತ್ತು. ಅಪಘಾತದ ಬಳಿಕ ಟಿಪ್ಪರ್ ಚಾಲಕ ಗಾಯಾಳುಗಳನ್ನು ಆಸ್ಪತ್ರೆಗೂ ದಾಖಲಿಸದೆ, ಪೊಲೀಸರಿಗೂ ಮಾಹಿತಿ ನೀಡದೆ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಎಸೈ ಚಂದ್ರಶೇಖರ್ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಾಸಿಕ್ಯೂಶನ್ ಪರ ಎಪಿಪಿ ಜನಾರ್ಧನ್ ವಾದಿಸಿದ್ದರು.