

ಚಿಕ್ಕಬಳ್ಳಾಪುರ: ತಾಲೂಕಿನ ವೀರದಿಮ್ಮಮ್ಮನ ಕಣಿವೆಯ ಇಳಿಜಾರಿನ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಲಾರಿ ಗುಡ್ಡಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಲಾರಿಯ ಮಾಲೀಕ ದೊಡ್ಡಪ್ಪಯ್ಯ( ೫೩) ಮೃತ. ಲಾರಿ ಚಾಲಕ ವೆಂಕಟೇಶ್ (೪೨) ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ದೊಡ್ಡಪ್ಪಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವೀರದಿಮ್ಮಮ್ಮನ ಕಣಿವೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಕಾಮಗಾರಿಗಳು ನಡೆಯುತ್ತಿವೆ. ಇದರ ನಡುವೆ ಇದರ ಮಾರ್ಗದಲ್ಲಿ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಲಾರಿಯಲ್ಲಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯು ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಕಲ್ಲಿನ ದೊಡ್ಡ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ಇಳಿಜಾರಿನ ತಿರುವುಗಳ ರಸ್ತೆ
ವೀರದಿಮ್ಮಮ್ಮನ ಕಣಿವೆಯು ಇಳಿಜಾರಿನ ರಸ್ತೆ. ಅಪಾಯಕಾರಿ ಹಲವು ತಿರುವುಗಳನ್ನು ಹೊಂದಿದೆ. ಇಲ್ಲಿ ಆಗಾಗ ಏರುಮುಖದ ರಸ್ತೆಯಲ್ಲಿ ಸಾಗದೇ ವಾಹನಗಳು ಕೆಟ್ಟು ಹೋಗುವ, ಇಳಿಮುಖವಾಗಿ ಬಂದು ಮಗಚಿ ಬೀಳುವ ಹಾಗೂ ಓವರ್ ಟೇಕ್ ಸಂದರ್ಭದಲ್ಲಿ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುತ್ತವೆ. ಇದರ ನಡುವೆಯೂ ಇಲ್ಲಿ ವೇಗವಾಗಿ ಸಂಚರಿಸುವುದು ಮಾತ್ರ ನಿಂತಿಲ್ಲ.