

ಸಿರಗುಪ್ಪ: ತಾಲೂಕಿನ ಹಳೆಕೋಟೆ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಹಜರತ್ ಸೈಯದ್ ಕಾಸೀಂ ವಲಿ ದರ್ಗಾದ ಹತ್ತಿರ ಶುಕ್ರವಾರ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಬೈಕ್ ಸವಾರರಾದ ಇಮ್ರಾನ್ ಅಲಿ (24), ಎಸ್.ಕೆ. ಖಾಲಿಂ (20) ಮೃತರು. ಇನ್ನೊಬ್ಬ ಜೋಸಮ್ ಉದ್ದಿನ ದಫೀದರ ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ತೆಕ್ಕಲಕೋಟೆಯಲ್ಲಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದರು.
ಬೆಳಗ್ಗೆ ಬೈಕ್‌ನಲ್ಲಿ ಮೂವರು ಸಿರಗುಪ್ಪದಿಂದ ತೆಕ್ಕಲಕೋಟೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಎಸ್ಪಿ ಶೋಭಾರಾಣಿ, ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ವೆಂಕಟೇಶ, ಸಿಪಿಐ ಸುಂದರೇಶ ಮತ್ತು ಪಿಎಸ್‌ಐ ತಾರಾಬಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.