

ಸಿದ್ದಾಪುರ: ಅರೆಕಾಡು ಗ್ರಾಮದಲ್ಲಿ ಶನಿವಾರ ಸಂಜೆ ಸರ್ಕಾರಿ ಜಾಗದಿಂದ ಆಕ್ರಮವಾಗಿ ಸಿಲ್ವರ್ ಮರಗಳನ್ನು ಕಡಿದು ಸಾಗಿಸುತ್ತಿದ್ದ ಲಾರಿಯನ್ನು ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊಕ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಉದ್ದೇಶಕ್ಕೆ ಕಾಯ್ದಿರಿಸಲಾದ ಸರ್ವೇ ನಂ.15/7 ರಲ್ಲಿರುವ 3 ಎಕರೆ ಸರ್ಕಾರಿ ಜಾಗ ಮತ್ತು ಗ್ರಾಪಂಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಸಿಲ್ವರ್ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಕಡಿದು ಲಾರಿಯಲ್ಲಿ ಸಾಗಣೆ ಮಾಡುತ್ತಿರುವುದನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಲಾರಿ ತಡೆದಿದ್ದಾರೆ. ಮರ ಕಡಿದ ವ್ಯಕ್ತಿಯ ಮೇಲೆ ಹಾಗೂ ಇದರಲ್ಲಿ ಶಾಮೀಲಾಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ, ಪಂಚಾಯಿತಿ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಉಪಾಧ್ಯಕ್ಷ ಮುಕ್ಕಾಟಿ ಚಿದಂಬರ, ಮಾಜಿ ಅಧ್ಯಕ್ಷ ಬಿ.ವೈ.ಪ್ರಭುಶೇಖರ್, ಸದಸ್ಯರಾದ ಬೋಳಿಯಾಡೀರ ಉಷಾ ತಂಗಮ್ಮ, ಮಮತಾ ಎಂ.ಎಂ , ಪಿಎ ಜನಾರ್ಧನ , ಪಿಕೆ ಯೂಸುಫ್ ಅಲಿ ಹಾಗೂ ಅರಣ್ಯಾಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.