ಸಕಲೇಶಪುರ ಬಾಳುಪೇಟೆಯಲ್ಲಿ ಲಾರಿ ಅಡ್ಡಗಟ್ಟಿ ಹಲ್ಲೆ

attack 1
Published on

ಉಪ್ಪಿನಂಗಡಿ: ಸಕಲೇಶಪುರ ತಾಲೂಕಿನ ಬಾಳುಪೇಟೆ ಎಂಬಲ್ಲಿ ವಾಹನಕ್ಕೆ ದಾರಿ ಬಿಟ್ಟು ಕೊಡದ ಕಾರಣಕ್ಕೆ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.

ಹಲ್ಲೆಗೀಡಾದ ಲಾರಿ ಚಾಲಕ ನೆಲ್ಯಾಡಿ ನಿವಾಸಿ ಮೊಹಮ್ಮದ್ ನಿಶಾನ್(28) ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ನೆಲ್ಯಾಡಿಯ ಶಾಂತಿಬೆಟ್ಟು ನಿವಾಸಿ ನಿಶಾನ್ ಮಂಗಳೂರಿನಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಡಸ್ಟರ್ ಕಾರಿನಲ್ಲಿ ಬಂದ ಮೂರು ಮಂದಿ ಸಕಲೇಶಪುರ ಠಾಣಾ ವ್ಯಾಪ್ತಿಯ ಬಾಳುಪೇಟೆ ಬೈಪಾಸ್‌ನಲ್ಲಿ ಅಡ್ಡಹಾಕಿ ಲಾರಿಯ ಗಾಜಿಗೆ ಹೊಡೆದು ಜಖಂಗೊಳಿಸಿದ್ದಾರೆ. ಜತೆಗೆ ನಿಶಾನ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ವಾಹನಕ್ಕೆ ದಾರಿ ಬಿಟ್ಟು ಕೊಡದ ಕಾರಣಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದಾರೆಂದು ಆಪಾದಿಸಲಾಗಿದೆ.

ಹಲ್ಲೆಗೀಡಾದ ಚಾಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ್ದಾರೆನ್ನಲಾದ ಧೀರಜ್, ನವೀನ್ ಹಾಗೂ ರಾಜು ಎಂಬುವರನ್ನು, ಅವರ ಕಾರು ಹಾಗೂ ಮರದ ದೊಣ್ಣೆಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net