ಅಪಘಾತದಲ್ಲಿ ಉದ್ಯೋಗಿ ಸಾವು, ಲಾರಿಗೆ ಕಲ್ಲು ತೂರಾಟ

23cmy6
Published on

ಚಿಕ್ಕಬಳ್ಳಾಪುರ: ಬೆಂಗಳೂರು-ಚಿಂತಾಮಣಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಕಲ್ಲು ಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್ ವೇರ್ ಉದ್ಯೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಘಟನೆಯ ಬಗ್ಗೆ ಮಾಹಿತಿ ನೀಡಿದರೂ ಪೊಲೀಸರು ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಕುಪಿತಗೊಂಡ ಸಾರ್ವಜನಿಕರು, ಕಲ್ಲು ತೂರಾಟ ನಡೆಸಿದ್ದಾರೆ.

ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದ ನಿವಾಸಿ ರಾಕೇಶ್ (28). ತೋಟದ ಜಮೀನಿಂದ ದ್ವಿಚಕ್ರವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ರಸ್ತೆಯ ತಿರುವಿನಲ್ಲಿ ಕಲ್ಲು ಗಣಿಗಾರಿಕೆಯ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಅಪಘಾತವಾಗುತ್ತಿದ್ದಂತೆ ರಸ್ತೆಯಲ್ಲಿ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇದರ ನಡುವೆ ಘಟನೆ ನಡೆದು ಅರ್ಧಗಂಟೆಯಾದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ ಎಂದು ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಕಲ್ಲು ತೂರಿದರು. ರಸ್ತೆಯ ವಿಭಜಕಕ್ಕೆ ಅವೈಜ್ಞಾನಿಕವಾಗಿ ಅಳವಡಿಸಿದ್ದ ಸಿಮೆಂಟ್ ಕಲ್ಲುಗಳನ್ನು ಕಿತ್ತು ಎಸೆದು, ಪ್ರತಿಭಟಿಸಿದರು. ಕೊನೆಗೆ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುಧಾಕರ್ ಸ್ಥಳಕ್ಕೆ ಬಂದು ಸಮಾಧಾನಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net