

ಕಣಕಟ್ಟೆ ಕುಮಾರ್ ಅರಸೀಕೆರೆ ಗ್ರಾಮಾಂತರ
ನಂಬಿದ ಭಕ್ತರ ಇಷ್ಟಾರ್ಥ ನೆರವೇರಿಸುವ ನೆಚ್ಚಿನ ದೇವ ಗುತ್ತಿನಕೆರೆಯ ರಂಗನಾಥಸ್ವಾಮಿ. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಕೋಡಿ ಮಠಕ್ಕೆ ಹತ್ತಿರವೇ ಇರುವ ಈ ಪುಣ್ಯಕ್ಷೇತ್ರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ದೇವಾಲಯಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ರಂಗನಾಥಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಆದರೆ, ಗುತ್ತಿನಕೆರೆ ಶ್ರೀ ರಂಗನಾಥಸ್ವಾಮಿ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಉದ್ಭವಿಸಿರುವುದು ವಿಶೇಷವಾಗಿದೆ. ಇಂದಿಗೂ ಸ್ವಾಮಿಯ ಮೂಲ ಶಿಲಾವಿಗ್ರಹ ಬೆಳೆಯುತ್ತಲೆ ಇದೆ ಎಂದು ಹೇಳಲಾಗುತ್ತಿದೆ.
ರಂಗನಾಥಸ್ವಾಮಿಯೂ ಕುದುರೆಯ ಮೇಲೆ ಬರುವಾಗ ಮಾರ್ಗಮಧ್ಯ ವಿಶ್ರಾಂತಿಗಾಗಿ ಕುದುರೆಯನ್ನು ಒಂದು ಜಗಳಗಂಟಿ ಮರಕ್ಕೆ ಕಟ್ಟಿ ಸ್ವಲ್ಪ ದೂರಲ್ಲಿ ಗುತ್ತಿಯ ಮೇಲೆ ಕುಳಿತು ಅಲ್ಲಿಯೇ ಶಿಲಾ ರೂಪ ತಾಳುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕುದುರೆ ಕೂಡ ಶುದ್ಧ ಬಿಳಿ ವರ್ಣದಿಂದ ಒಂದು ಕಪ್ಪುಚುಕ್ಕೆಯಿಲ್ಲದೆ ಶಿಲಾ ರೂಪ ತಾಳಿತು, ಎಂತಹ ಸುಡುಬಿಸಿಲಿನಲ್ಲೂ ಮುಟ್ಟಿದರೆ ತಂಪಾಗಿರುತಿತ್ತು ಎಂದು ಹೇಳಲಾಗುತ್ತದೆ.
ಇತ್ತೀಚೆಗೆ ಕುದುರೆಯ ಶಿಲಾವಿಗ್ರಹದ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ಮಾಡುವಾಗ ಡೈನಾಮೇಟ್ ಸ್ಫೋಟದಿಂದ ಸಂಪೂರ್ಣವಾಗಿ ಕುದುರೆ ಶಿಲ್ಪ ಭಗ್ನವಾಗಿ, ಕೆಲವು ಕಾರ್ಮಿಕರು ರಕ್ತಕಾರಿ ಸತ್ತರು, ನಂತರ ಅಲ್ಲಿ ಕೆಲಸ ಮಾಡಲು ಹೆದರಿ ಕೆಲಸವನ್ನು ಸ್ಥಗಿತಗೊಳಿಸಲಾಯಿತು ಎಂದು ಗ್ರಾಮಸ್ಥರು ಹೇಳುತ್ತಾರೆ.
ಲಕ್ಷಾಂತರ ಭಕ್ತರು: ರಂಗನಾಥಸ್ವಾಮಿಗೆ ರಾಜ್ಯದ ಹಲವೆಡೆ ಲಕ್ಷಾಂತರ ಭಕ್ತರಿದ್ದಾರೆ. ಅನೇಕರಿಗೆ ಮನೆದೇವರಾಗಿ ಅನುಗ್ರಹಿಸುತ್ತಿದ್ದಾನೆ. ಭಕ್ತರು ಯಾವುದೇ ಶುಭಕಾರ್ಯಗಳನ್ನು ಮಾಡುವಾಗ, ಕಷ್ಟದ ಸಮಯದಲ್ಲಿ ಅಪ್ಪಣೆ ಕೇಳುವುದು ವಿಶೇಷವಾಗಿದೆ. ಕಣಿಗಲೇ ಹೂವಿನಲ್ಲಿ ಸ್ವಾಮಿಯಲ್ಲಿ ಎಡ=ಬಲ ಅಪ್ಪಣೆ ಕೇಳುವುದು ಇಲ್ಲಿನ ವಾಡಿಕೆ. ಇದರಿಂದ ಸಾವಿರಾರು ಭಕ್ತರು ಒಳಿತನ್ನು ಕಂಡವರಿದ್ದಾರೆ. ಸಾವಿರಾರು ಜನರು ಸ್ವಾಮಿಯ ಕೃಪೆಯಿಂದ ಸಂತಾನ ಭಾಗ್ಯವನ್ನು ಪಡೆದವರಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಪಾಂಚರಾತ್ರಾ ಆಗಮ ಪದ್ಧತಿಯಲ್ಲಿ ಶ್ರೀ ವೈಷ್ಣವರು ಅರ್ಚಕರಾಗಿ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ವರ್ಷದಲ್ಲಿ ಅನೇಕ ಸೇವೆಗಳು ಉತ್ಸವಾದಿಗಳು ನಡೆಯುತ್ತಲೇ ಇರುತ್ತವೆ. ಸ್ವಾಮಿಯ ಜಾತ್ರಾ ಮಹೋತ್ಸವ ವಿಶೇಷವಾಗಿ ಮಕರ ಸಂಕ್ರಾತಿಯಂದು ಪ್ರಾರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ದಿನ ಬೆಳಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆ, ಧ್ವಜಾರೋಹಣ ನಡೆದು ಸಂಜೆ ವಿಶೇಷವಾಗಿ ತಿರುಕಲ್ಯಾಣೋತ್ಸವ ನಡೆಯುತ್ತದೆ.
ಸಾವಿರಾರು ಜನರು ಕಲ್ಯಾಣೋತ್ಸವವನ್ನು ದರ್ಶನ ಮಾಡಲು ಕೊರೆಯುವ ಚಳಿಯನ್ನು ಲೆಕ್ಕಿಸದೆ ಆಗಮಿಸುತ್ತಾರೆ. ನಂತರ ಗ್ರಾಮಕ್ಕೆ ಉತ್ತಮ ಮಳೆ ಬೆಳೆಯಾಗಿ ಗ್ರಾಮ ಸುಭಿಕ್ಷವಾಗಿರಲಿ ಎಂದು ಸಂಕ್ರಾಂತಿಯ ಬೆಳಗ್ಗೆ ಮೊಲವನ್ನು ಬೇಟೆಯಾಡಿ ಹಿಡಿದು ತಂದು ಪೂಜೆ ಸಲ್ಲಿಸಿ ರಾತ್ರಿ ಉತ್ಸವ ನಡೆದ ನಂತರ ಮೊಲವನ್ನು ಬಿಡುವುದು ಸಂಪ್ರದಾಯ.
ಸಂಕ್ರಾಂತಿಯ ಮರುದಿನ ಬ್ರಹ್ಮರಥೋತ್ಸವ ನಡೆಯುತ್ತದೆ. ನಾಡಿನ ಎಲ್ಲ ಕಡೆಗಳಲ್ಲಿರುವ ಶ್ರೀವೈಷ್ಣವರು ಸಾವಿರಾರು ಜನರು ಭಾಗವಹಿಸುತ್ತಾರೆ. ಈ ದಿನದ ರಥೋತ್ಸವ ಶ್ರೀವೈಷ್ಣವರಿಗೆ ಮಾತ್ರ ಮೀಸಲಿಡಲಾಗಿದೆ. ಬೆಳಗ್ಗೆ ಸುಪ್ರಭಾತಸೇವೆ, ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ನಂತರ 12 ಗಂಟೆಗೆ ಹೂವಿನ ನಡೆಮುಡಿಯಲ್ಲಿ ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಿ ಬ್ರಹ್ಮರಥೋತ್ಸವನ್ನು ಶ್ರೀ ವೈಷ್ಣವರು ಮಾತ್ರವೇ ಎಳೆಯಲಾಗುತ್ತದೆ. ಆ ದಿನ ಸ್ವಾಮಿಯ ದರ್ಶನ ಮಾಡಲು ರಥಹರಿಯುವವರೆಗೂ ಭಕ್ತರು ಉಪವಾಸದಿಂದ ಕಾಯುತ್ತಿರುತ್ತಾರೆ. ರಥೋತ್ಸವಕ್ಕೂ ಮುನ್ನ ಗರುಡಪಕ್ಷಿ ರಥ ಪ್ರದಕ್ಷಿಣೆ ಮಾಡುವುದನ್ನು ಪ್ರತಿ ವರ್ಷವೂ ಭಕ್ತರು ಕಣ್ತುಂಬಿಕೊಂಡು ಗೋವಿಂದ, ಗೋವಿಂದಾ ಎಂದು ಹರ್ಷೋದ್ಗಾರ ಮಾಡುತ್ತಾರೆ.
ರಥೋತ್ಸವದ ನಂತರ ಎಲ್ಲ ಭಕ್ತರಿಗೂ ಪೊಂಗಲ್, ಪುಳಿಯೋಗರೆ ಪ್ರಸಾದ ವಿನಿಯೋಗ ಹಾಗೂ 3 ದಿನವೂ ಅನ್ನಸಂತರ್ಪಣೆ ನಡೆಯುತ್ತದೆ. ಗ್ರಾಮದ ಶ್ರೀ ಮೂಡಲಗಿರಿ ತಿಮ್ಮಪ್ಪಸ್ವಾಮಿ ಸುತ್ತಮುತ್ತಲ ಗ್ರಾಮಗಳಾದ ಹಾರನಹಳ್ಳಿ ಶ್ರೀ ಕೊಡಮ್ಮ ದೇವಿ, ಯಳವಾರೆ ಶ್ರೀ ಹುಚ್ಚಮ್ಮದೇವಿ, ಹುಲ್ಲೆನಳ್ಳಿ ಶ್ರೀ ಚಿಕ್ಕಮ್ಮದೇವಿ, ತಳಲೂರು ಶ್ರೀ ಬನ್ನಿ ಮಹಾಕಾಳಿ ಹಾಗೂ ಮಾಕನಹಳ್ಳಿ ಶ್ರೀ ಆಂಜನೇಯಸ್ವಾಮಿಯವರು ಸ್ವಾಮಿಯವರನ್ನು ಜಾತ್ರಾಮಹೋತ್ಸವಕ್ಕೆ ಆಮಂತ್ರಿಸಿ ರಥೋತ್ಸವ ಮುಗಿದ ನಂತರ ಧ್ವಜ ಅವರೋಹಣ ಮಾಡಿ ಸ್ವಸ್ಥಾನಕ್ಕೆ ಮರಳುತ್ತಾರೆ ಎಂಬ ನಂಬಿಕೆ ಇದೆ.
ಬ್ರಹ್ಮರಥೋತ್ಸವ ಮುಗಿದ ನಂತರ ಸ್ವಾಮಿಯೂ ರಥದ ಮೇಲೆ ಇರುತ್ತಾರೆ ಮರುದಿನ ದೊಡ್ಡ ರಥೋತ್ಸವ ನಡೆಯುತ್ತದೆ. ಆ ದಿನ ಎಲ್ಲ ಭಕ್ತರಿಗೂ ರಥೋತ್ಸವಕ್ಕೆ ಮುಕ್ತ ಅವಕಾಶ ಹಾಗೂ ದೂತರಾಯ ಚೆಲುವರಾಯಸ್ವಾಮಿಯ ಪೂಜಾಕುಣಿತ ಹೆಚ್ಚು ಆಕರ್ಷಕವಾಗಿರುತ್ತದೆ. ದೇವರುಗಳು ಸ್ವಾಮಿಯ ರಥಕ್ಕೆ ಕಾಯಿ ಒಡೆದು ರಥಪ್ರದಕ್ಷಿಣೆ ಬಂದು ರಥಕ್ಕೆ ಅಭಿಮುಖವಾಗಿಯೇ ಮುನ್ನಡೆಯುತ್ತಾರೆ. ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು ದವನ ಎಸೆದು ಗೋವಿಂದಾ.. ಗೋವಿಂದಾ.. ಎಂದು ಹರ್ಷೋದ್ಗಾರ ಮಾಡಿ ಪುನೀತರಾಗುತ್ತಾರೆ.
ರಥದಿಂದ ಸ್ವಾಮಿಯು ಇಳಿದ ನಂತರ ಎಲ್ಲ ದೇವರುಗಳು ಸ್ವಾಮಿಯನ್ನು ಉಯ್ಯಲೆಯಲ್ಲಿ ಕೂರಿಸಿ ತೂಗುವುದನ್ನು ಭಕ್ತರಿಗೆ ನೋಡುವುದೇ ಸೌಭಾಗ್ಯ. ನಂತರ ಕೆಂಚಪ್ಪ ಸ್ವಾಮಿಯವರ ಮಣೆವು ಸೇವೆ ಸಂಜೆ ಸ್ವಾಮಿಗೆ ತೀರ್ಥಸ್ನಾನ ನಡೆಯುವುದು ಅಲ್ಲಿಗೆ ರಥೋತ್ಸವದ ಪ್ರಧಾನ ಗಟ್ಟ ಮುಗಿದು ಮರುದಿನ ಕ್ಷೇತ್ರದೇವತೆಗಳಾದ ಶ್ರೀ ಕೆಂಚಪ್ಪ ಸ್ವಾಮಿಗೆ ಹರಿಸೇವೆಯನ್ನು ಭಕ್ತರು ಗ್ರಾಮಸ್ಥರು ನಡೆಸಿ ರಥೋತ್ಸವದ 4ನೇ ದಿನ ಎಲ್ಲ ಗ್ರಾಮದೇವತೆಗಳನ್ನು ಎಲ್ಲ ಭಕ್ತರು ಅಮ್ಮನವರಿಗೆ ಮಡಿಲಕ್ಕಿ ಸಮರ್ಪಿಸಿ ಸಂಜೆ ಎಲ್ಲ ದೇವರ ಸಮ್ಮುಖದಲ್ಲಿ ಧ್ವಜ ಅವರೋಹಣ ಮಾಡಿಸಿ ದೇವತೆಗಳನ್ನು ಬೀಳ್ಕೊಡುತ್ತಾರೆ. ಹೀಗೆ 4 ದಿನ ಸ್ವಾಮಿಯ ಜಾತ್ರಾಮಹೋತ್ಸವ ನಡೆಯುತ್ತದೆ.
ಕ್ಷೇತ್ರದಲ್ಲಿ ವಿಶೇಷ ಹಬ್ಬ ಹರಿದಿನಗಳಾದ ಶ್ರೀರಾಮನವಮಿ, ಶ್ರೀ ಕೃಷ್ಣಜನ್ಮಾಷ್ಟಮಿ, ಶ್ರಾವಣ ಶನಿವಾರ, ಕಾರ್ತಿಕಮಾಸ, ವೈಕುಂಠ ಏಕಾದಶಿ ಹೀಗೆ ನಾನಾ ವಿಶೇಷ ಉತ್ಸವಗಳು ನಡೆಯುತ್ತವೆ. ಊರಿನಲ್ಲಿ ದೇವಸ್ಥಾನದ ಅಕ್ಕಪಕ್ಕ ಶ್ರೀ ಕೆಂಚಪ್ಪ ಸ್ವಾಮಿ ಬೇವಿನಮರದಮ್ಮ ದೇವಿ, ಮೂಡಲಗಿರಿ ತಿಮಪ್ಪಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಸಾಮ್ರಾಜ್ಯ ಬೀರಲಿಂಗೇಶ್ವರ ಸ್ವಾಮಿ, ಲಕ್ಷ್ಮೀದೇವಿ, ಅರುವೆ ಲಕ್ಕಮ್ಮದೇವಿ ಹಾಗೂ ಬೂತಪ್ಪಸ್ವಾಮಿ ಅನೇಕ ದೇವಾಲಯಗಳಿವೆ.
ದೇವಾಲಯದಲ್ಲಿ ಶ್ರೀದೂತರಾಯ ಚೆಲುವರಾಯಸ್ವಾಮಿಯವರಿದ್ದು, ವಿಶೇಷವೆಂದರೆ ಮೊದಲಸಲ ಬರವಣಿಗೆ ಪ್ರಾರಂಭ ಮಾಡಿದ ದೂತರಾಯಸ್ವಾಮಿ ಇದಾಗಿದೆ.