ಶ್ರೀರಾಮನ ಪಾದುಕೆಗೆ ಬೇಕಿದೆ ರಕ್ಷಣೆ

ಶ್ರೀರಾಮನೇ ಸ್ಥಾಪಿಸಿದ ಎನ್ನಲಾದ ಶಿವಲಿಂಗಕ್ಕೆ ಸ್ಥಳೀಯರು ಪೂಜೆ ಸಲ್ಲಿಸಿರುವುದು.
ಶ್ರೀರಾಮನೇ ಸ್ಥಾಪಿಸಿದ ಎನ್ನಲಾದ ಶಿವಲಿಂಗಕ್ಕೆ ಸ್ಥಳೀಯರು ಪೂಜೆ ಸಲ್ಲಿಸಿರುವುದು.
Published on

ಆಲೂರು: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾದ 2024ರ ಜನವರಿಯಲ್ಲಿ ದೇಶಾದ್ಯಂತ ಶ್ರೀರಾಮ ಸಂಚರಿಸಿದ ಜಾಗಗಳು ಎಷ್ಟು ವೇಗವಾಗಿ ಬೆಳಕಿಗೆ ಬಂದವೋ, ಅಷ್ಟೇ ವೇಗವಾಗಿ ತೆರೆಮರೆಗೆ ಸರಿದಿವೆ.

ಅದಕ್ಕೊಂದು ತಾಜಾ ನಿದರ್ಶನ ತಾಲೂಕಿನ ಹೇಮಾವತಿ ನದಿ ದಡದಲ್ಲಿರುವ ಕಾಗನೂರು ಗ್ರಾಮದ ಪಾದಾರೆಕಲ್ಲು ಸ್ಥಳ. ಶ್ರೀರಾಮಚಂದ್ರ ಇಲ್ಲಿ ಸಂಚರಿಸಿದ್ದ ಎಂಬುದಕ್ಕೆ ಬೃಹದಾಕಾರದ ಬಂಡೆಗಲ್ಲುಗಳ ಮೇಲೆ ಪಾದುಕೆ ಇದ್ದು ಅದು ಗೋಚರವಾಗಿತ್ತು. ಅಲ್ಲದೇ ಈ ಬಂಡೆಯಲ್ಲಿ ಶ್ರೀರಾಮನಿಂದಲೇ ಪೂಜಿಸಲ್ಪಟ್ಟ ಈಶ್ವರಲಿಂಗ, ಆಂಜನೇಯನ ಚಿತ್ರ, ಬಿಲ್ಲು-ಬಾಣ, ಪಾದದ ಬಳಿಯಲ್ಲಿರುವ ಬ್ರಾಹ್ಮೀಲಿಪಿಯ ಬರಹಗಳು ಸಹ ಗೋಚರವಾಗಿತ್ತು. ಆಗ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಲಿನ ತಾಲೂಕು ಜಿಲ್ಲೆಯ ಜನರು ಕೌತುಕದಿಂದ ಪೂಜೆ ಸಲ್ಲಿಸಿದ್ದರು. 2024ರ ಜ.22 ರಂದು ವಿಶೇಷ ಪೂಜೆ ಪುನಸ್ಕಾರಗಳು ನಡೆದಿದ್ದವು. ಆದರೆ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಾಗವನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಗನೂರಿನ ಈ ವಿಶೇಷತೆ ಸ್ಥಳೀಯರಿಗೆ ಹಿಂದಿನಿಂದಲೂ ಪರಿಚಯವಿತ್ತು. ಸಾಮಾನ್ಯವಾಗಿ ಎಲ್ಲ ಹಬ್ಬ ಹರಿದಿನ, ಮನೆಯಲ್ಲಿ ಶುಭ ಸಮಾರಂಭಗಳ ಸಂದರ್ಭಗಳಲ್ಲಿ ಮನೆಗಳಲ್ಲಿ ವಿಶೇಷಗಳಿದ್ದಾಗ ಈ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಯೇ ಪ್ರಸಾದ ಸ್ವೀಕರಿಸಿ ಬರುವ ವಾಡಿಕೆ ಇಟ್ಟುಕೊಂಡಿದ್ದರು. ಆದರೆ ಹೇಮಾವತಿ ಜಲಾಶಯ ನಿರ್ಮಾಣವಾದ ಬಳಿಕ ಬಂಡೆ ಸಂಪೂರ್ಣ ನೀರಿನಲ್ಲಿ ಮುಳುಗಿ ಕುರುಹು ಕಾಣದಾಗಿತ್ತು. ಕಳೆದ ವರ್ಷ ನದಿ ನೀರು ಕಡಿಮೆಯಾಗಿದ್ದರಿಂದ ಕಾಣಸಿತ್ತು. ಆದರೆ ಈ ಬಾರಿ ಮತ್ತೆ ಜಲಾವೃತವಾಗಿದ್ದು ಸಂಕ್ರಾಂತಿ ಸಮಯದಲ್ಲಿ ಪೂಜೆ ಸಲ್ಲಿಸಲು ಬಂದ ರಾಮಭಕ್ತರು ವಾಪಸಾದರು.

ನದಿ ದಂಡೆಯಲ್ಲಿರುವ ಶ್ರೀರಾಮನ ಪಾದುಕೆಗಳಿಗೆ ರಕ್ಷಣೆ ಒದಗಿಸಬೇಕು. ಚಿಕ್ಕದಾದ ದೇವಾಲಯ ನಿರ್ಮಿಸಬೇಕೆಂಬ ಮನವಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ಸರ್ಕಾರದ ಅನುಮತಿ, ಅನುದಾನದಿಂದ ಇಲ್ಲಿಗೆ ಸದಾಕಾಲವೂ ಹೋಗಿ ಪೂಜೆ ಸಲ್ಲಿಸಲು ಅನುವಾಗುವಂತೆ ವ್ಯವಸ್ಥೆಯಾಗಬೇಕು ಎಂಬುದು ಸ್ಥಳೀಯರ ಕೂಗು. ಆದರೆ ಅದನ್ನು ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ, ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಅಯೋಧ್ಯೆ ರಾಮನ ಪ್ರತಿಷ್ಠಾಪನೆ ವೇಳೆ ಇಲ್ಲಿನ ಪಾದಾರೆಕಲ್ಲು ಹೆಚ್ಚು ಪ್ರಚಾರ ಪಡೆದುಕೊಂಡಿದ್ದರಿಂದ ಈ ಪಾದುಕೆಗಳನ್ನು ನೋಡಲು ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಮುಳುಗಡೆಗೊಂಡಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ನೀರಾವರಿ ನಿಗಮ ಈ ಬಗ್ಗೆ ಚಿಂತನೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿದರೆ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಾಡುಗುವುದು ಮಾತ್ರವಲ್ಲದೆ ಸ್ಥಳೀಯರಿಗೆ ಅನುಕೂಲವಾಗಲಿದೆ.

ಪಾದಾರೆಕಲ್ಲು ಕಾಣುತ್ತಿದೆಯಾ? ಅಲ್ಲಿಗೆ ಹೋಗಬಹುದಾ? ಎಂದು ಹಲವಾರು ಭಕ್ತರು ಇಲ್ಲಿಗೆ ಬಂದು ಕೇಳುತ್ತಾರೆ. ಸದ್ಯ ಸ್ಥಳ ಜಲಾವೃತವಾಗಿರುವುದರಿಂದ ಅಸಾಧ್ಯ ಎಂಬ ಉತ್ತರ ಹೇಳಿ ವಾಪಸ್ ಕಳುಹಿಸುತ್ತಿದ್ದೇವೆ. ಯಾವಾಗಲೂ ಆ ಸನ್ನಿಧಿಗೆ ಹೋಗಿ ಬರುವಂತಾಗಬೇಕು. ಆ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.

> ಸವಿತಾ ಚಂದ್ರಶೇಖರ್, ಮಲ್ಲಾಪುರ ಗ್ರಾಪಂ ಸದಸ್ಯೆ

2024ರ ಸಂಕ್ರಾಂತಿ ದಿನ ಬಂಡೆಯನ್ನು ಶುಚಿಗೊಳಿಸಿ ಪೂಜಿಸಲಾಗಿತ್ತು. ಅಯೋಧ್ಯಾ ಮಂದಿರ ಲೋಕಾರ್ಪಣೆ ದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿದ್ದರು. ನಂತರ ಶಿವರಾತ್ರಿ, ಯುಗಾದಿ ವೇಳೆಗೆ ನೀರು ತುಂಬಿ ಪಾದುಕೆಗಳು ನೀರಿನಲ್ಲಿ ಮುಳುಗಿದವು. ಇಲ್ಲೊಂದು ಮಂದಿರ ನಿರ್ಮಾಣವಾಗಿ ವರ್ಷದ ಎಲ್ಲ ಹಬ್ಬಗಳಲ್ಲೂ ಪೂಜೆಗೆ ಅವಕಾಶವಾಗಬೇಕು.

> ಕೆ.ಎಚ್. ಶಿವೇಗೌಡ, ಕಾಗನೂರು ಗ್ರಾಮಸ್ಥ.

2023ರಲ್ಲಿ ಮಳೆ ಬಾರದ್ದರಿಂದ ಅಕ್ಟೋಬರ್ ವೇಳೆಗೆ ನದಿ ನೀರು ಕಡಿಮೆಯಾಗಿ ಪಾದಾರೆಕಲ್ಲು ಕಾಣುತ್ತಿತ್ತು. ಆದರೆ 2024ರಲ್ಲಿ ವಿಪರೀತ ಮಳೆ ಬಿದ್ದ ಕಾರಣ ಶಿವರಾತ್ರಿಗೆ ರಾಮನ ಪಾದುಕೆ ದರ್ಶನ ಪಡೆಯದಂತಾಗಿರುವುದು ಬೇಸರ ತರಿಸಿದೆ. ಸುತ್ತಲಿನ ಹತ್ತಾರು ಗ್ರಾಮಸ್ಥರು, ದೂರದೂರುಗಳಿಂದ ಭಕ್ತರು ಬಂದು ನಮೂರ ಪೂಜೆಯಲ್ಲಿ ಭಾಗಿಯಾಗಿದ್ದರು. ಸುತ್ತಲಿನ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ತಂಗಿರುವ ಪ್ರವಾಸಿಗರು ಇದರಿಂದ ಬೇಸರ ವ್ಯಕ್ತಪಡಿಸುತ್ತಾರೆ.

> ಮಂಜುನಾಥ್, ಗ್ರಾಮಸ್ಥ.

ಕಾಗನೂರು ಗ್ರಾಮ ಕಳೆದ ಒಂದು ವರ್ಷದಿಂದ ಈ ಪಾದದ ಬಂಡೆಯಿಂದಾಗಿ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಶ್ರೀರಾಮ ನಡೆದಾಡಿದ ಭೂಮಿಯಲ್ಲಿ ನಾವಿದ್ದೇವೆಂಬ ಹೆಮ್ಮೆ. ಆದರೆ ಈ ಹೇಮಾವತಿಯ ಹಿನ್ನೀರಿನ ಶಾಪ ನಮಗೆ ಆ ಸ್ಥಳಕ್ಕೆ ಹೋಗುವ ಅವಕಾಶವನ್ನು ತಪ್ಪಿಸುತ್ತಾ ಈಗಾಗಲೇ ಸುಮಾರು ನಲವತ್ತು ವರ್ಷವೇ ಸಂದಿದೆ. ಇತ್ತೀಚಿನ ವರ್ಷಗಳಲ್ಲಿ ಯುಗಾದಿಗಾದರೂ ಹೋಗಿ ಪೂಜಿಸಬಹುದಿತ್ತು, ಆದರೆ ಈಗ ಅಲ್ಲಿಗೆ ಹೋಗಲು ಸಾಧ್ಯವಾಗದಿರುವುದು ಬೇಸರ ತಂದಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಅಲ್ಲಿಗೆ ಭಕ್ತರು ಸದಾ ಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕು.

> ಶಾಂತೇಗೌಡ, ಗ್ರಾಮಸ್ಥ

ಕಳೆದ ವರ್ಷ ಗ್ರಾಮಸ್ಥರೇ ಒಟ್ಟಾಗಿ ಪಾದಾರೆಕಲ್ಲು ಜಾಗವನ್ನು ಸ್ವಚ್ಛಗೊಳಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದ್ದರು. ಮೂಲಸೌಕರ್ಯ ಕಲ್ಪಿಸುವಂತೆ ಯಾರೂ ಮನವಿ ಸಲ್ಲಿಸಿಲ್ಲ. ಗ್ರಾಮಸ್ಥರು ಅರ್ಜಿ ಸಲ್ಲಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

> ಪರಮೇಶ್, ಮಲ್ಲಾಪುರ ಗ್ರಾ.ಪಂ. ಪಿಡಿಒ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net