

ಆದರ್ಶ್ ಅದ್ಕಲೇಗಾರ್, ಮಡಿಕೇರಿ
ವಿಜಯ ದಶಮಿಯಂದು ಕರಗಳನ್ನು ಹೊರಡಿಸುವ ’ಪೇಟೆ ಶ್ರೀ ರಾಮಮಂದಿರ’ ದೇವಾಲಯದಲ್ಲಿರುವ ’ಶ್ರೀರಾಮ’ ಭಕ್ತರ ಕಷ್ಟ, ಸುಖಗಳಿಗೆ ಸ್ಪಂದಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿರುವ ’ಪೇಟೆ ಶ್ರೀ ರಾಮಮಂದಿರ’, ಭಕ್ತರ ಬೇಡಿಕೆಯನ್ನು ಕಾರ್ಯಸಿದ್ಧಿಗೊಳಿಸುತ್ತದೆ ಎಂಬ ನಿಟ್ಟಿನಲ್ಲಿ ನಗರದ ದೊಡ್ಡಪೇಟೆಯಲ್ಲಿ ನೆಲೆ ನಿಂತಿದ್ದಾನೆ. ದೇವಾಲಯಕ್ಕೆ ಹೆಚ್ಚಾಗಿ ಮದುವೆ ಪ್ರಾಪ್ತಿಗೋಸ್ಕರ ಭಕ್ತರು ಆಗಮಿಸಿದರೆ, ಉಳಿದವರು ತಮ್ಮತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಆಗಮಿಸುತ್ತಾರೆ. ಬೇಡಿಕೆ ಈಡೇರಿದ ನಂತರ ತಾವು ನೆನೆಸಿದನ್ನು ಶ್ರೀರಾಮನಿಗೆ ಅರ್ಪಿಸುತ್ತಾರೆ ಎಂದು ದೇವಾಲಯದ ಅರ್ಚರು ಹೇಳುತ್ತಾರೆ.
ಸುಮಾರು ೧೫೦ ವರ್ಷಗಳ ಹಿಂದೆ ಕೊಡಗಿನಲ್ಲಿ ವಿವಿಧ ತರದ ಸಾಂಕ್ರಮಿಕ ರೋಗಗಳಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಪರಿಹಾರಕ್ಕಾಗಿ ೪ ಶಕ್ತಿ ದೇವತೆಗಳನ್ನು ದೊಡ್ಡಪೇಟೆಗೆ ಕರೆತಂದು ನಗರ ಪ್ರದಕ್ಷಿಣೆ ಮಾಡಿಸುವ ವ್ಯವಸ್ಥೆಯನ್ನು ದಸರಾ ಹಬ್ಬದ ಹಿನ್ನೆಲೆಯಲ್ಲಿ ಆಚರಿಸಲು ನಿರ್ಧರಿಸಿದರು. ಈ ಸಂದರ್ಭ ೪ ಶಕ್ತಿ ದೇವತೆಗಳಾದ ಶ್ರೀ ಚೌಟಿಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಮ್ಮ ಹಾಗೂ ದಂಡಿನಮಾರಿಯಮ್ಮ ದೇವತೆಗಳು ಕರಗ ಕಟ್ಟಿದಂತೆ ಅಣ್ಣನಾದ ಶ್ರೀ ಮಹಾವಿಷ್ಣುವಿನ ಸ್ಥಾನವಾದ ಪೇಟೆ ಶ್ರೀ ರಾಮ ಮಂದಿರಕ್ಕೆ ಬರುವ ಸಂಪ್ರದಾಯವಾಯಿತು.
ನಂತರ ೯ ದಿನಗಳ ಕಾಲ ೪ ಶಕ್ತಿದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ಮಾಡುತ್ತಿರುತ್ತದೆ. ೧೦ನೇ ದಿನ ವಿಜಯದಶಮಿಯಂದು ದೊಡ್ಡಪೇಟೆಯ ಶ್ರೀರಾಮಮಂದಿರದಿಂದ ಕಳಶ ಹೊತ್ತ ಪಲ್ಲಕ್ಕಿ, ಮಂಗಳವಾದ್ಯದೊಂದಿಗೆ ೪ ಶಕ್ತಿದೇವತೆಗಳನ್ನು ಹೊರಡಿಸಿಕೊಂಡು ಮುಖ್ಯಬೀದಿಗಳಲ್ಲಿ ಸಾಗಿ ಮಹದೇವಪೇಟೆಯ ಎಲ್ಲೆಪೇಟೆಯಲ್ಲಿ ಬನ್ನಿ ಕಡಿಯುವ ಮೂಲಕ ವಿಜಯ ದಶಮಿ ಉತ್ಸವಕ್ಕೆ ಮುಕ್ತಾಯ ಹಾಡಲಾಗುತ್ತದೆ.
ಮಂಜಿನಂತೆ ಕರಗಿರ ಸಂಕ್ರಾಮಿಕ ರೋಗ: ಪ್ರಪ್ರಥಮವಾಗಿ ನಡೆದ ದಸರಾ ಹಬ್ಬದ ಪುಣ್ಯದ ಫಲವಾಗಿ ಜಿಲ್ಲೆಯ ಎಲ್ಲೆಡೆ ತಲೆದೂಡಿದ್ದ ಸಾಂಕ್ರಾಮಿಕ ರೋಗಗಳು ಮಂಜಿನಂತೆ ಕರಗಿ ಹೋಯಿತು. ಆರೋಗ್ಯಕರ ವಾತಾವರಣ ಮೂಡಿಸಿದ್ದ ಪರಿಣಾಮ ಧಾರ್ಮಿಕ ಮುಖಂಡರು ಪ್ರತಿವರ್ಷ ಶಕ್ತಿದೇವತೆಗಳ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ದೇವಾಲಯದಲ್ಲಿ ರಾಮ, ಮಹಾಗಣಪತಿ, ನವಗ್ರಹ ದೇವತೆಗಳು, ಆಂಜನೇಯ ದೇವರ ವಿಗ್ರಹಗಳು ಇವೆ.
೨ನೇ ಮಹಾಯುದ್ಧ ಸಂದರ್ಭದಲ್ಲಿ ನಿಲ್ಲದ ಉತ್ಸವ
೨ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಚ್ ಸರ್ಕಾರ ಎಲ್ಲಾ ಉತ್ಸವಗಳನ್ನು ಬಹಿಷ್ಕರಿಸಿತ್ತು. ಆದರೆ ಮಡಿಕೇರಿ ನಗರದಲ್ಲಿ ಪೇಟೆ ಶ್ರೀ ರಾಮಮಂದಿರದಿಂದ ಹೊರಡುವ ಪಲ್ಲಕ್ಕಿಯ ಮೆರವಣಿಗೆ ಮಾತ್ರ ನಿಲ್ಲಲಿಲ್ಲ. ಅಲ್ಲದೆ ೧೯೬೨ರಲ್ಲಿ ಭಾರತ-ಚೀನಾ ಯುದ್ಧದ ಸಂದರ್ಭದಲ್ಲೂ ಸಹ ಶ್ರೀ ರಾಮಮಂದಿರದಿಂದ ಕರಗಗಳನ್ನು ಹೊರಡಿಸುವುದನ್ನು ನಿಲ್ಲಿಸಲಿಲ್ಲ ಎಂದು ಇತಿಹಾಸ ಹೇಳುತ್ತದೆ.
ಉತ್ಸವಗಳು
ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷ ಏಪ್ರಿಲ್ ೧೭ ನಡೆಯುತ್ತದೆ. ದೇವಾಲಯದಲ್ಲಿ ಕ್ರಷ್ಣ ಜನ್ಮಾಷ್ಠಮಿ, ವಿನಾಯಕ ಚತಿರ್ಥಿ, ವನರಾತ್ರಿ ಯತ್ಸವ, ವಿಜಯ ದಶಮಿ, ದೇಪಾವಳಿ, ಕೇದಾರೇಶ್ವರ ವೃತ, ರಾಮನವಮಿ, ಹನುಮ ಜಯಂತಿ, ರಾಜಗೋಪುರದ ವಾರ್ಷಿಕೋತ್ಸವಗಳು ನಡೆಯುತ್ತದೆ.
ವಿಶೇಷ ಪೂಜೆಗಳು
ಮಹಾಗಣಪತಿಗೆ: ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಗಣಪರಿ ಹೋಮ, ಅಷ್ಟೋತ್ತರ ಪೂಜೆ. ರಾಮನಿಗೆ: ಅಷ್ಟೋತ್ತರ ಶತನಾಮಾವಳಿ ಅರ್ಚನೆ, ವಿಷ್ಣು ಸಹಸ್ರನಾಮ ಸೇವೆ, ಅಲಂಕಾರ ಸೇವೆ, ಕುಂಕುಮಾರ್ಚನೆ. ಆಂಜನೇಯ: ವೀಳ್ಯದೆಲೆ ಸೇವೆ ಪವಮಾನ ಅಭಿಷೇಕ. ನವಗ್ರಹ ದೇವತೆ: ನವಗ್ರಹ ಜಪ, ಏಕಗ್ರಹ ಜಪ, ಗ್ರಹಶಾಂತಿ ಹೋಮ, ನವಗ್ರಹ ಪೂಜೆಗಳು ನಡೆಯುತ್ತದೆ.
ಮಾರ್ಗ
ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತ, ಪೊಲೀಸ್ ಠಾಣೆ, ಖಾಸಾಗಿ ಬಸ್ ನಿಲ್ದಾಣ ಮಾರ್ಗವಾಗಿ ಇಂದಿರಗಾಂಧಿ ವೃತ್ತದಿಂದ ಎಡಕ್ಕೆ ೧೦೦ ಮೀಟರ್ ಸಾಗಬೇಕು.
ದೇವಾಲಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾಧಿಗಳು ಸೇರಿದಂತೆ ಪ್ರವಾಸಿಗರು ಬರುತ್ತಾರೆ. ಹೆಚ್ಚಾಗಿ ವಿವಾಹ ಪ್ರಾಪ್ತಿಗಾಗಿ ಹರಕೆ ಹೊತ್ತು ಹೋಗುತ್ತಾರೆ. ಈಡೇರಿದ ನಂತರ ದೇವಾಲಯಕ್ಕೆ ಅರ್ಪಿಸುತ್ತಾರೆ. ದೇವಾಲಯದಲ್ಲಿ ವಿಶೇಷವಾಗಿ ಬುಧವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ.
ಬಿ.ಎಸ್.ಶ್ರೀಕಾಂತ್ ಭಟ್, ಅರ್ಚಕರು