

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸ್ವಾಭಾವಿಕ ವಿಚಾರಗಳ ಬಗ್ಗೆ ಮಾತ್ರವೇ ಮಹಾವೀರ ಸ್ವಾಮಿ ಸಂದೇಶ ನೀಡಿದ್ದಾರೆ. ಜಗತ್ತಿನ ಪ್ರತಿಯೊಂದು ಧರ್ಮದಲ್ಲಿ ಒಂದು ಧ್ಯೇಯ ಇದೆ. ಆ ಗುರಿಯನ್ನು ತಲುಪಬೇಕಾದರೆ ಬಂಧನಗಳಿಂದ ಮುಕ್ತಗೊಳ್ಳಬೇಕು. ಜಗತ್ತಿನ ಎಲ್ಲ ಜೀವಿಗಳು ಮೋಕ್ಷ ಪಡೆಯಬೇಕು ಎನ್ನುವುದು ಜೈನ ಧರ್ಮದ ಸಂದೇಶ ಎಂದು ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಜೈನ ಸಮುದಾಯದವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.
ವರ್ತನೆಗಳನ್ನು ಬದಲಿಸಿಕೊಂಡು ದೈವಿಕ ಗುಣಗಳನ್ನು ಬೆಳೆಸಿಕೊಂಡಾಗ ಶ್ರೇಷ್ಠರಾಗಬಹುದು. ಇಂದ್ರಿಯ ಗೆದ್ದವನು ಜಿನ, ಗೆಲ್ಲುವ ಪ್ರಯತ್ನ ಮಾಡುವವನು ಜೈನ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಪಟ್ಟಣಶೆಟ್ಟಿ ಸುದೇಶ್ ಕುಮಾರ್, ಚೌಟರ ಅರಮನೆಯ ಆದರ್ಶ್ ಜೈನ್, ರತ್ನಾಕರ್ ಜೈನ್, ಜೈನ್ ಮಿಲನ್ ರಾಜ್ಯಾಧ್ಯಕ್ಷ ಯುವರಾಜ್, ಪಡುಬಿದ್ರಿ ಅರಮನೆಯ ಅರಸರು, ಕೂಳೂರಿನ ಆಶಿಕ್ ಕುಮಾರ್, ಪಡ್ಯಾರ್‌ಬೆಟ್ಟಿನ ಜೀವಂಧರ ಕುಮಾರ್, ಉದ್ಯಮಿ ಶ್ರೀಪತಿ ಭಟ್ ಇದ್ದರು. ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹಾಗೂ ಉಪನ್ಯಾಸಕ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಗೌರವಾರ್ಪಣೆ
ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಹಾಗೂ ಸಹಕಾರಿ ಕ್ಷೇತ್ರದ ಸಾಧಕ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನ ಭಜನೆ ನಡೆಯಿತು. ಕೊಂಬು ವಾದ್ಯ, ನಾದಸ್ವರ, ಪೂರ್ಣಕುಂಭದೊಂದಿಗೆ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು.
ವಿವಿಧ ಅಭಿಷೇಕಗಳು
ಸುತ್ತಲಿನ ವಾತಾವರಣ ಧಾರ್ಮಿಕ ವೈಭವ ಹೆಚ್ಚಿಸಲು 24 ತೀಥರ್ಂಕರರ ವಿಗ್ರಹಗಳ ಕೆತ್ತನೆ, ಹೂವಿನಿಂದ ಮಾಡಲ್ಪಟ್ಟ ಆನೆಯ ಆಕೃತಿ, ವಿವಿಧ ಪ್ರಾಣಿ ಪ್ರಕ್ಷಿಗಳ ಆಕೃತಿ, ಸಭಾಂಗಣದ ಎರಡು ಕಡೆಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಲೋಗೋದ ಆಕೃತಿಯನ್ನು ಹೂವಿನಿಂದ ನಿರ್ಮಿಸಲಾಗಿತ್ತು. ಜೈನ ಸಂಪ್ರದಾಯದಂತೆ ಧಾರ್ಮಿಕ ವಿಧಿ ನಡೆಸಲಾಯಿತು. ಜಲಾಭಿಷೇಕ, ಎಳನೀರು, ಇಕ್ಷು ರಸ, ಕ್ಷೀರ, ಕಷಾಯ, ಕಾಶ್ಮೀರಿ ಕೇಸರಿ, ಕಲ್ಕ ಚೂರ್ಣ, ಅರಸಿನ, ಚತುಷ್ಕೋನ ಕಳಶ, ಚಂದನ, ಅಷ್ಟಗಂಧ, ಕನಕ ಪುಷ್ಟವೃಷ್ಟಿಯ ದ್ರವ್ಯಗಳ ಅಭಿಷೇಕದ ನಂತರ ಶಾಂತಿ ಮಂತ್ರದೊಂದಿಗೆ ಪೂರ್ಣಕುಂಭ, ಮಹಾಮಂಗಳಾರತಿ ನಡೆಯಿತು.