

ವಿಜಯವಾಣಿ ಸುದ್ದಿಜಾಲ ಉಡುಪಿ
ಭಗವಾನ್ ಮಹಾವೀರರ ಮುಖ್ಯ ತತ್ತ್ವವಾಗಿರುವ ಅಹಿಂಸಾ ಮಾರ್ಗವನ್ನು ಎಲ್ಲರೂ ಅನುಸರಿಸುವಂತಾಗಬೇಕು. ಅವರ ಚಿಂತನೆ ಇಂದಿನ ಕಾಲಘಟ್ಟಕ್ಕೆ ಅತಿ ಅವಶ್ಯಕವೂ ಆಗಿದ್ದು, ಎಲ್ಲರ ಬದುಕಿನ ದಾರಿದೀಪವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಮಿಲನ ಉಡುಪಿ ಜಿಲ್ಲೆ ಆಶ್ರಯದಲ್ಲಿ ಏ.10ರಂದು ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಜೈನ ಮಿಲನ್ನ ಅಧ್ಯಕ್ಷ ಡಾ.ನಿತಿನ್ ಪಾಟೇಲ, ಕಾರ್ಯಾಧ್ಯಕ್ಷ ಪ್ರಸನ್ನಕುಮಾರ, ಜೈನ ಮಿಲನ್ನ ಪದಾಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜೈನ ಮಿಲನ್ನ ಕಾರ್ಯದರ್ಶಿ ಡಾ. ನಿತಿನ್ಕುಮಾರ ವಂದಿಸಿದರು.
ಪ್ರಸ್ತುತ ಸಮಯದಲ್ಲಿ ಸಮಾಜದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚತೊಡಗಿದೆ. ಯುವ ಸಮುದಾಯವೂ ಹಿಂಸೆಯಲ್ಲಿ ತೊಡಗುತ್ತಿರುವುದು ಆತಂಕಕಾರಿ ವಿಚಾರ. ಹೀಗಾಗಿ ಮಹಾವೀರರ ಅಹಿಂಸಾ ತತ್ತ್ವಗಳನ್ನು ಇನ್ನಷ್ಟು ಪ್ರಚಾರಗೊಳಿಸಬೇಕಿದೆ. ಈ ಮಾರ್ಗದಿಂದ ಮಾತ್ರ ಜನರು ಶಾಂತಿಯುತ ಜೀವನ ನಡೆಸಲು ಸಾಧ್ಯ. | ಅಬೀದ್ ಗದ್ಯಾಳ. ಅಪರ ಜಿಲ್ಲಾಧಿಕಾರಿ