ಶ್ರೀಕೃಷ್ಣನ ಸಂದೇಶ ಮನುಕುಲಕ್ಕೆ ಅಗತ್ಯ

CLK JAYANTI 06
Published on

ಚಳ್ಳಕೆರೆ: ಶ್ರೀಕೃಷ್ಣನ ಸಂದೇಶಗಳು ಸಮಾಜದಲ್ಲಿ ಸಾರ್ವತ್ರಿಕ ಸತ್ಯವಾಗಿ ಮನುಕುಲವನ್ನು ಜಾಗೃತಿಗೊಳಿಸುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶ್ರೀಕೃಷ್ಣ ಜಯಂತಿ ಒಂದು ಜಾತಿ, ವರ್ಗಕ್ಕೆ ಸೀಮಿತವಲ್ಲ. ಸರ್ವರ ಮನದಲ್ಲಿ ಭಗವಂತನ ಸ್ಥಾನದಲ್ಲಿದ್ದಾನೆ. ಮಹಾಭಾರತದ ಮಹತ್ವವನ್ನು ಜಗತ್ತಿಗೆ ಅರ್ಥೈಸುವಲ್ಲಿ ಶ್ರೀಕೃಷ್ಣನ ಪಾತ್ರ ಮಹತ್ವವಾಗಿ ಕಾಣುತ್ತದೆ ಎಂದು ಹೇಳಿದರು.

ಗೊಲ್ಲ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕಿದೆ. ಕೆಲ ಮೌಢ್ಯ ಆಚರಣೆಗಳು ಕೊನೆಗಾಣಬೇಕು. ಬಹುವರ್ಷಗಳ ಬೇಡಿಕೆ ಆಗಿರುವ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಕೊಡಲು ಈಗಾಗಲೇ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ ಎಂದರು.

ಕ್ಯಾತಪ್ಪನ ಪರಿಶೆಗಾಗಿ ದೊಡ್ಡೇರಿ ಸಮೀಪದ ಗೋಮಾಳ ಭೂಮಿ ಮಂಜೂರು ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಕೆ.ರವಿಕುಮಾರ್ ಮಾತನಾಡಿ, ಶ್ರೀಕೃಷ್ಣ ಜಯಂತಿ ಆಚರಣೆಗೆ ಸರ್ಕಾರದ ಹಂತದಲ್ಲಿ ಗೌರವ ಸಿಕ್ಕಿರುವುದು ಸಮುದಾಯಕ್ಕೆ ಹೆಮ್ಮೆ ಇದೆ. ದಾರ್ಶನಿಕರು ಮತ್ತು ಮಹಾಪುರುಷರ ಆಚರಣೆಗಳು ಸಮಾಜಮುಖಿಯಾಗಿ ನಡೆಯಬೇಕು ಎಂದರು.

1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀಕೃಷ್ಣ ಭವನ ಪೂರ್ಣಗೊಂಡ ಮೇಲೆ ಅದ್ದೂರಿಯಾಗಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಾಡುಗೊಲ್ಲರ ಸಂಘದ ತಾಲೂಕಾಧ್ಯಕ್ಷ ಬೂದಿಹಳ್ಳಿ ರಾಜಣ್ಣ, ನಗರಸಭಾ ಸದಸ್ಯರಾದ ಸುಮಾ ಭರಮಯ್ಯ, ಬಿ.ಟಿ.ರಮೇಶ್‌ಗೌಡ, ತಾಪಂ ಮಾಜಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಿವೃತ್ತ ಪ್ರಾಚಾರ್ಯರಾದ ಬಿ.ವಿ.ಸಿರಿಯಣ್ಣ, ಎಂ.ಕರಿಯಪ್ಪ, ನಿವೃತ್ತ ಮುಖ್ಯಶಿಕ್ಷಕ ಶಿವಣ್ಣ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಿ.ಟಿ. ಶಶಿಧರ, ನಿವೃತ್ತ ಪೊಲೀಸ್ ಉಪಅಧೀಕ್ಷಕ ಟಿ.ಬಿ.ರಾಜಣ್ಣ, ಎಸ್.ಎಚ್.ಸೈಯದ್, ಮಲ್ಲಿಕಾರ್ಜುನಯ್ಯ, ನಾಗರಾಜ, ಜಿ.ಎಚ್. ಹನುಮಂತಯ್ಯ, ಎಸ್. ಮುಜೀಬುಲ್ಲಾ, ಮಂಜುನಾಥ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net