

ಶಿವಮೊಗ್ಗ: ಶ್ರೀಕೃಷ್ಣ ನಮ್ಮೆಲ್ಲರ ಆರಾಧ್ಯ ದೈವ. ಇಡೀ ಜಗತ್ತಿಗೆ ಬೆಳಕು ನೀಡಿ ಧರ್ಮ, ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಕೃಷ್ಣ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಗೊಲ್ಲರ(ಯಾದವ) ಸಂಘದ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ಶ್ರೀಕೃಷ್ಣ ಗೋ ಸಂರಕ್ಷಣೆಗೆ ಸಂಪೂರ್ಣವಾಗಿ ಶಕ್ತಿ ಕೊಟ್ಟವನು. ಈ ಸಮಾಜಕ್ಕೆ ಮಾತ್ರ ದೇವರಲ್ಲ, ಇಡೀ ಪ್ರಪಂಚಕ್ಕೆ ದೇವರು. ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸವನ್ನು ಮಾಡು ಅದರ ಫಲ ನನಗೆ ಬಿಡು, ಅದಕ್ಕೆ ದಕ್ಕಬೇಕಾದ ಫಲ ದಕ್ಕುತ್ತದೆ ಎಂಬ ಕೃಷ್ಣನ ಮಾತಿನಂತೆ ಧರ್ಮ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಜಿ.ಕೆ ಪ್ರೇಮಾ ಮಾತನಾಡಿ, ಕೃಷ್ಣನನ್ನು ಪುರಾಣದ ನೆಲೆಯಲ್ಲಿ ಮತ್ತು ಇತಿಹಾಸದ ನೆಲೆಯಲ್ಲಿ ನೋಡಬಹುದು. ಯಾದವ ಸಾಮ್ರಾಜ್ಯ ಮಥುರದ ಅರಸ ಕಂಸನ ತಂಗಿ ದೇವಕಿ ಮತ್ತು ವಸುದೇವನ ಮಗನಾದ ಜಗದ್ಧೋದಾರಕ ಕೃಷ್ಣನನ್ನು ಸಾಕಿ ಸಲುಹಿದವಳು ಯಶೋದಾ. ಕೃಷ್ಣನಲ್ಲಿ ಅಪಾರ ಸಾಹಸ ಶಕ್ತಿ ಇದ್ದು ಕಾಳಿಂಗ ಸರ್ಪದ ಉಪಟಳದಿಂದ ಜನರನ್ನು ರಕ್ಷಿಸುತ್ತಾನೆ. ಮನಸ್ಸಿನಲ್ಲಿಯೇ ಲೋಕವನ್ನು ಅವಲೋಕನ ಮಾಡಿಕೊಳ್ಳುವ ಕೃಷ್ಣ, ಸುಧಾಮನ ಕಷ್ಟಗಳನ್ನು ನಿವಾರಿಸುತ್ತಾನೆ. ಸತ್ಯಭಾಮೆಯ ಅತ್ಯಂತ ಸರಳ ಭಕ್ತಿಯನ್ನು ಮೆಚ್ಚಿ ತುಳಸಿ ದಳಕ್ಕೆ ಶ್ರೀಕೃಷ್ಣ ಪರಮಾತ್ಮ ಒಲಿಯುತ್ತಾನೆ. ಅವನ ವಿಶೇಷ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಧರ್ಮ ಪ್ರಸಾದ್, ರಮೇಶ್ ಇದ್ದರು.