ಶ್ರೀಕೃಷ್ಣನ ಸ್ಮರಣೆಯಲ್ಲಿ ಸಕಲವೂ ನಿವಾರಣೆ

JLR ph 2 Sep 6 krishna-janmashtami
Published on

ಜಗಳೂರು: ಜಗದೋದ್ಧಾರಕ ಶ್ರೀಕೃಷ್ಣನನ್ನು ಸ್ಮರಿಸುವುದರಿಂದ ಸಕಲವೂ ನಿವಾರಣೆಯಾಗಲಿದೆ. ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಭಗವಾನ್ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗವಾನ್ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ಶ್ರೀಕೃಷ್ಣ್ಣನ ಜನ್ಮದಿನದಂದು ಆಚರಿಸಲಾಗುವ ಸಂಭ್ರಮದ ಹಬ್ಬವೇ ಜನ್ಮಾಷ್ಟಮಿ ಎಂದರು.
ಶಿಷ್ಟರ ರಕ್ಷಣೆ ಮತ್ತು ದುಷ್ಟ್ಟರ ಹರಣ ಮಾಡಿ ಮಾನವಕುಲದ ಕಲ್ಯಾಣಕ್ಕಾಗಿ ಭಾದ್ರಪದ ಮಾಸ ಕೃಷ್ಣಪಕ್ಷದ ಅಷ್ಟಮಿಯ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ವಸುದೇವ, ದೇವಕಿಯರ ಮಗನಾಗಿ ಅವತರಿಸಿದವನು ಶ್ರೀಕೃಷ್ಣ ಎಂದರು.

ಜೀವನದುದ್ದಕ್ಕೂ ದೀನ ರಕ್ಷಕ, ಶಿಕ್ಷಕ, ಜ್ಞಾನಿಯಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಹಾಭಾರತದ ಯುದ್ಧಭೂಮಿಯಲ್ಲಿ ಬೋಧಿಸಿದ ತತ್ವಜ್ಞಾನಗಳಿಂದಾಗಿ ಎಲ್ಲರಿಗೂ ಶ್ರೀಕೃಷ್ಣನ ಮಹತ್ವ ಅರಿಯುವಂತಾಯಿತು ಎಂದು ತಿಳಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಶ್ರೀಕೃಷ್ಣ ಅವತಾರ ಪುರುಷನಾಗಿ ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಸಂಹರಿಸಿ ನ್ಯಾಯ ಎತ್ತಿ ಹಿಡಿದನು. ಆತನ ಸ್ಮರಿಸದ ಮನೆ, ಮನಗಳಿಲ್ಲ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗ್ರೇಡ್- 2 ಮಂಜಾನಂದ, ಯಾದವ ಸಮಾಜದ ತಾಲೂಕಾಧ್ಯಕ್ಷ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್‌ಪಟೇಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಅಲ್ಪ ಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಅಹಮದ್ ಅಲಿ, ಯಾದವ ಸಮಾಜದ ಮುಖಂಡರಾದ ಜೀವಣ್ಣ, ಲ್ಯಾಬ್ ಶಿವು, ವೀರೇಶ್, ಕಾಟಪ್ಪ, ಮಹಾಲಿಂಗಪ್ಪ, ಬಡಪ್ಪ, ರಮೇಶ್ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net