

ಶಿಕಾರಿಪುರ: ಶ್ರೀಕೃಷ್ಣ ಧರ್ಮದ ಸಂಕೇತ. ಅವನ ಬಾಲಲೀಲೆಗಳು ಅನಂತ. ಕೃಷ್ಣನ ವೇಷವನ್ನು ಹಾಕುವ ಮೂಲಕ ಪುಟಾಣಿಗಳಲ್ಲಿ ಬಾಲಕೃಷ್ಣನನ್ನು ಕಾಣುತ್ತೇವೆ ಎಂದು ಪುರಸಭೆ ಮಾಜಿ ಸದಸ್ಯೆ ಶೈಲಜಾ ಹೇಳಿದರು.
ನಗರದ ಮೈತ್ರಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಕೃಷ್ಣಜನ್ಮಾಷ್ಟಮಿಯಲ್ಲಿ ಮಾತನಾಡಿ, ಕೃಷ್ಣ ತನ್ನ ಬಾಲಲೀಲೆಗಳ ಮೂಲಕ ದುಷ್ಟ ಸಂಹಾರ ಮಾಡಿ ಶಿಷ್ಟ ರಕ್ಷಣೆ ಮಾಡಿದ. ಅವನು ಪರಾಕ್ರಮದ ಪ್ರತಿರೂಪವಾಗಿದ್ದ ಅತ್ಯಂತ ಚಾಣಾಕ್ಷಮತಿ ಎಂದು ಬಣ್ಣಿಸಿದರು.
ಶ್ರೀಕೃಷ್ಣನ ವೇಷಧಾರಣೆಯಿಂದ ನಮ್ಮ ಮಕ್ಕಳಲ್ಲಿ ನಮಗರಿವಿಲ್ಲದಂತೆ ನಮ್ಮ ಸಂಸ್ಕೃತಿ, ಪರಂಪರೆಗಳ ಅನಾವರಣವಾಗುತ್ತದೆ. ಮಕ್ಕಳೆಂದರೆ ಮುದ್ದು. ಅವರನ್ನು ಭಗವಂತನ, ಮಹಾತ್ಮರ, ಸತ್ಪುರುಷರ, ಶರಣರ ರೂಪದಲ್ಲಿ ನೋಡುವುದೇ ಚೆಂದ. ಕೃಷ್ಣ ದೈವಾಂಶ ಸಂಭೂತನಾದರೂ ಸಹಜ ಮಾನವರಂತೆಯೇ ಬದುಕಿದ ಧರ್ಮಸಂಸ್ಥಾಪಕ ಎಂದರು.
ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣಪಕ್ಷದ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ ಎಂದರು.
ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟ ಮಕ್ಕಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು. ಕೃಷ್ಣ ವೇಷಧಾರಿಯಾಗಿದ್ದ ಅದ್ವೇತ್‌ನನ್ನು ಸಾಂಪ್ರದಾಯಿಕ ಶೈಲಿಯಲ್ಲಿ, ಶಾಸ್ತ್ರೋಕ್ತವಾಗಿ ತೊಟ್ಟಿಲಿಗೆ ಹಾಕಿದ ಕಾರ್ಯಕ್ರಮ ಜನಮನ ಸೆಳೆಯಿತು.