

ಚಿಕ್ಕಮಗಳೂರು: ಸಮಾಜಕ್ಕೆ ಕಂಟಕ ಎದುರಾದಾಗೆಲ್ಲಾ ಭಗವಂತ ಒಂದೊAದು ಅವತಾರವನ್ನೆತ್ತುವ ಮೂಲಕ ಜನರನ್ನು ರಕ್ಷಿಸಿಕೊಂಡು ಬಂದಿದ್ದಾನೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ಜನರನ್ನು ಕಾಪಾಡಿದ್ದಾನೆ. ಶ್ರೀಕೃಷ್ಣನ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿದಾಗ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದು ಶ್ರೀಸಾಯಿ ಏಂಜಲ್ಸ್ ಶಾಲೆಯ ಮುಖ್ಯಸ್ಥ ನಾಗೇಶ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶ್ರೀ ಸಾಯಿ ಏಂಜಲ್ಸ್ ಶಾಲೆಯಲ್ಲಿ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾನ ನೀಡಿದ ಅವರು, ಕಂಸ ಹಾಗೂ ರಾಕ್ಷಸರ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಸಾಕ್ಷಾತ್ ಮಹಾವಿಷ್ಣುವೆ ಕೃಷ್ಣನ ರೂಪದಲ್ಲಿ ದೇವಕಿಯ ಮಗನಾಗಿ ಜನಿಸುವ ಮೂಲಕ ಸಮಾಜವನ್ನು ಕಾಪಾಡುತ್ತಾನೆ ಎಂದರು.
ದ್ವಾರಕಾ ದೇಶದ ರಾಜನಾಗಿ ಉಗ್ರ ಸೇನಾ ಆಡಳಿತ ನಡೆಸುತ್ತಿರುತ್ತಾನೆ. ಈತನ ಮಕ್ಕಳೇ ಕಂಸ ಹಾಗೂ ದೇವಕಿ. ತನ್ನ ಸಹೋದರಿಯ ಮಗನಿಂದಲೇ ತನ್ನ ಅಂತ್ಯ ಎಂದು ಅರಿತ ಕಂಸ ರಾಕ್ಷಸನಾಗಿ ರೂಪುಗೊಳ್ಳುತ್ತಾನೆ. ತನ್ನ ತಂಗಿಗೆ ಮಗು ಜನಿಸಿದ ಕ್ಷಣ ಅವುಗಳನ್ನು ನಿರಂತರವಾಗಿ ಕೊಲ್ಲಿಸುವ ಕೆಲಸ ಮಾಡುತ್ತಾನೆ. ಆದರೆ ದೇವಕಿಗೆ ೭ನೇ ಮಗುವಾಗಿ ಕೃಷ್ಣನ ಜನನವಾಗುತ್ತದೆ. ಆದರೆ ಕಂಸನಿಗೆ ಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಬದಲಿಗೆ ಕೃಷ್ಣನೇ ಕಂಸನಿಗೆ ಅಂತ್ಯವನ್ನು ಕಾಣಿಸುವ ಮೂಲಕ ದ್ವಾರಕಾ ದೇಶವನ್ನು ಕಾಪಾಡುತ್ತಾನೆ ಎಂದು ಹೇಳಿದರು.
ಬ್ರಹ್ಮ, ವಿಷ್ಣು, ಮಹೇಶ್ವರ, ಕೃಷ್ಣ, ಪುಟ್ಟಪರ್ತಿ ಸಾಯಿಬಾಬಾ, ಶಿರಡಿ ಸಾಯಿಬಾಬಾ, ಶ್ರೀ ಸತ್ಯ ಸಾಯಿಬಾಬಾ ಹೀಗೆ ಎಲ್ಲರೂ ಸಮಾಜವನ್ನು ಉದ್ದಾರ ಮಾಡುವ ಉz್ದೆÃಶದಿಂದಲೇ ಜನ್ಮ ತಾಳಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದಾಗ ಸಮಾಜದಲ್ಲಿ ಕೆಟ್ಟದು ಎಂಬ ಯಾವುದೇ ಕೆಲಸವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶ್ರೀಸಾಯಿ ಏಂಜಲ್ಸ್ ಶಾಲೆಯ ಮುಖ್ಯಸ್ಥರಾದ ವಿಜಯಾ ನಾಗೇಶ್, ವಿಜಯವಾಣಿ ಸ್ಥಾನಿಕ ಸಂಪಾದಕ ಶೃಂಗೇರಿ ಚಂದ್ರಶೇಖರ್, ಜಾಹಿರಾತು ವಿಭಾಗದ ಮುಖ್ಯಸ್ಥ ದೇವಕುಮಾರ್, ಶ್ರೀಸಾಯಿ ಏಂಜಲ್ಸ್ ಶಾಲೆಯ ಪ್ರಕಾಶ್ ಮತ್ತಿತರರಿದ್ದರು.
ಶ್ರೀಕೃಷ್ಣನಿಗೆ ಉಯ್ಯಾಲೆ ಸೇವೆ
ಶ್ರೀಸಾಯಿ ಏಂಜಲ್ಸ್ ಶಾಲೆಯಲ್ಲಿ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನಿಗೆ ಉಯ್ಯಾಲೆ ಸೇವೆ ನೆರವೇರಿಸಲಾಯಿತು. ಶಯನಾವಸ್ಥೆಯಲ್ಲಿರುವ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಕೂರಿಸುವ ಮೂಲಕ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶಾಲೆಯ ಮುಖ್ಯಸ್ಥೆ ವಿಜಯಾ ನಾಗೇಶ್ ಸೇರಿದಂತೆ ಶಾಲೆಯ ಶಿಕ್ಷಕಿಯರು ಸೇರಿ ತೊಟ್ಟಿಲನ್ನು ತೂಗುವ ಮೂಲಕ ಉಯ್ಯಾಲೆ ಸೇವೆ ನೆರವೇರಿಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತೆ ಶ್ರೀಕೃಷ್ಣನನ್ನು ಪ್ರಾರ್ಥಿಸಿದರು.
ವಿದ್ಯಾರ್ಥಿಗಳಿಂದ ಭಜನೆ ಹಾಗೂ ನೃತ್ಯ
ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಸಾಯಿ ಏಂಜಲ್ಸ್ ಶಾಲೆಯ ಮಕ್ಕಳು ಭಜನೆ ಹಾಗೂ ಶ್ರೀಕೃಷ್ಣನಿಗೆ ಸಂಬAಧಿಸಿದ ಭಕ್ತಿಗೀತೆಗಳನ್ನು ಸಾಮೂಹಿಕವಾಗಿ ಸುಶ್ರಾವ್ಯವಾಗಿ ಗಾಯನ ಮಾಡುವ ಮೂಲಕ ಗಮನ ಸೆಳೆದರು. ಶಾಲೆಯ ಮುಖ್ಯಸ್ಥ ನಾಗೇಶ್ ತಾಳದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಲ್ಲದೇ ತಾವೂ ಮಕ್ಕಳೊಂದಿಗೆ ಸೇರಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬಳಿಕ ಶಾಲೆಯ ವಿದ್ಯಾರ್ಥಿನಿಯರು ಭಕ್ತಿಗೀತೆಗಳಿಗೆ ಹೆಜ್ಜೆಯನ್ನು ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶ್ರೀಕೃಷ್ಣನಿಗೆ ಮಹಾಮಂಗಳಾರತಿ ನಡೆಸಲಾಯಿತು.
ಮಡಕೆ ಒಡೆದು ಹರ್ಷ
ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಹಸ ಪ್ರದರ್ಶನಗಳನ್ನು ಮಾಡಿದರು. ಒಬ್ಬರ ಮೇಲೆ ಒಬ್ಬರು ಹತ್ತಿಕೊಂಡು ಪಿಲ್ಲರ್ ನಿರ್ಮಾಣ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಬಳಿಕ ಶ್ರೀಕೃಷ್ಣ ವೇಷಧಾರಿ ವಿದ್ಯಾರ್ಥಿ ಮಡಕೆ ಒಡೆಯುವ ಮೂಲಕ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಶನಿವಾರ ಐದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡಿದ್ದರೆ, ಶುಕ್ರವಾರ ಐದನೇ ತರಗತಿವರೆಗಿನ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಬಂದು ಕೃಷ್ಣ ಜನ್ಮಾಷ್ಠಮಿ ರಂಗು ಹೆಚ್ಚಿಸಿದ್ದು ವಿಶೇಷವಾಗಿತ್ತು.