ಗಣೇಶ ಮಂಟಪದಲ್ಲಿ ಶ್ರೀಕೃಷ್ಣ ಬಾಲಲೀಲೆ

ganesha
ಶಿವಮೊಗ್ಗ ಗಾಂಧಿ ಬಜಾರ್ ತುಳಜಾ ಭವಾನಿ ದೇವಾಲಯದಲ್ಲಿ ಗಣೇಶ ಮಂಟಪದಲ್ಲಿ ಶ್ರೀ ಕೃಷ್ಣನ ಬಾಲ ಲೀಲೆ ಅಲಂಕಾರ ಮಾಡಿರುವುದು.
Published on

ಶಿವಮೊಗ್ಗ: ಗಾಂಧಿ ಬಜಾರ್ ತುಳಜಾಭವಾನಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದಿಂದ 84 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಣೇಶ ಮಂಟಪದಲ್ಲಿ ಶ್ರೀಕೃಷ್ಣನ ಬಾಲ ಲೀಲೆ ಹಾಗೂ ಪೂತನಿಯ ವಿಮೋಚನೆಯ ಸನ್ನಿವೇಶ ವಿವರಿಸುವ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ಸಮಾಜದ ಅಧ್ಯಕ್ಷ ಗಜೇಂದ್ರನಾಥ ಮಾಳೋದೆ ತಿಳಿಸಿದ್ದಾರೆ.

ಐದು ದಶಕಗಳಿಂದ ರಾಮಾಯಣ, ಮಹಾಭಾರತ, ಮತ್ತು ಪುರಾಣ ಕಥೆಗಳ ವಿಶೇಷ ಅಲಂಕಾರವನ್ನು ಗಣೇಶೋತ್ಸವದಲ್ಲಿ ಮಾಡಲಾಗುತ್ತಿದೆ. ಅ.8ರ ಸಂಜೆ 5ಕ್ಕೆ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಡೊಳ್ಳು ಕುಣಿತ, ಚಿಣ್ಣರ ವಿವಿಧ ವೇಷಭೂಷಣ ಸಹಿತ ವಿದ್ಯುತ್ ದೀಪಗಳಿಂದ ಅಲಂಕೃತವಾದ ಮಂಟಪದಲ್ಲಿ ಮಂಗಳವಾದ್ಯದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ ಎಂದಿದ್ದಾರೆ.
ರಾಗಿಹಕ್ಲು ಗಣೇಶ ವಿಸರ್ಜನೆ: ಕಟ್ಟೆಹಕ್ಕಲು ಸಮೀಪದ ರಾಗಿಹಕ್ಲಿನಲ್ಲಿ ವಿದ್ಯಾ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು ಸೆ.22ರ ಸಂಜೆ ರಾಜಬೀದಿ ಉತ್ಸವದೊಂದಿಗೆ ವಿಸರ್ಜಿಸಲಾಗುವುದು. ನಾಲ್ಕು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಟ್ಟೆಹಕ್ಲಿನ ಶಾರದ ಮೆಲೋಡಿಸ್ ತಂಡದವರಿಂದ ರಸಮಂಜರಿ, ಸ್ಥಳೀಯ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯರಿಗೆ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಆಕಾಶವಾಣಿ ಕಲಾವಿದ ಶಿವರುದ್ರಪ್ಪ ಎನ್.ಜೋಗಿ ತಂಡದವರು ಗೀಗೀ ಪದ ಪ್ರಸ್ತುತಪಡಿಸಿದರು. ಹೊನ್ನೇಕೇರಿ ವಿನಾಯಕ ಸೇವಾ ಸಮಿತಿಯವರು ಕಲೆಯ ಕೊಲೆ ನಾಟಕ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net