

ಮೈಸೂರು: ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ವತಿಯಿಂದ ಮಂಗಳವಾರ ತ್ಯಾಗರಾಜ ರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಹಾಗೂ ರಾಧೆಯರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್ ಮಾತನಾಡಿ, ನಾವು ಒಳ್ಳೆಯದು ಬಯಸಿದರೆ ನಮಗೆ ಒಳ್ಳೆಯದಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕತ್ತಲಿನಿಂದ ಬೆಳಕಿನ ಕಡೆಗೆ ಬರುವ ಪ್ರಯತ್ನ ಮಾಡಬೇಕು. ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ನಾವು ಭಗವಂತನ ಮೊರೆ ಹೋಗಬೇಕು. ಭಗವಂತನ ಮೊರೆ ಹೋಗಲು ನಮ್ಮಲ್ಲಿ ಆತ್ಮಶ್ರದ್ಧೆ ಇರಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಶ್ರೀಕೃಷ್ಣ ವೇಷ ಹಾಕಿದರೆ ಸಾಲದು, ಮಕ್ಕಳಿಗೆ ಶ್ರೀಕೃಷ್ಣ ಸಮಾಜವನ್ನು ಹೇಗೆ ಉದ್ಧಾರ ಮಾಡಿದ ಎಂಬುದನ್ನು ಸಹ ತಿಳಿಸಿಕೊಡಬೇಕು. ಆ ಮೂಲಕ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕೆಯುಎಂಸಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್‌ರಾಜೇ ಅರಸ್, ವಕೀಲರಾದ ದೇವಕಿ ಅರಸ್, ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಸಂಸ್ಥಾಪಕ ಜಿ. ಪುನೀತ್ ಹಾಗೂ ಇತರರು ಇದ್ದರು.