ಶಕ್ತಿದೈವ ಪಾಲಿಬೆಟ್ಟದ ಶ್ರೀಗಣಪತಿ

ಚಿತ್ರ 05ಎಸ್ ಡಿ ಪಿ 01
ಪಾಲಿಬೆಟ್ಟ ಶ್ರೀಗಣಪತಿ ದೇವಾಲಯ
Published on

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಪ್ರಮುಖ ಶ್ರದ್ಧಾ ಕೇಂದ್ರಗಳಲ್ಲಿ ಪಾಲಿಬೆಟ್ಟ ಶ್ರೀ ಗಣಪತಿ ದೇವಾಲಯವೂ ಒಂದಾಗಿದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಕ್ತಿ ದೈವವೆಂದೇ ಮನೆ ಮಾತಾಗಿದೆ.

ಈ ಭಾಗದಲ್ಲಿ ಹಿಂದು ಧಾರ್ಮಿಕ ಕೇಂದ್ರ ಇಲ್ಲ ಎಂಬ ಕಾರಣಕ್ಕೆ 1983ರಲ್ಲಿ ದಿ.ಕುಟ್ಟಂಡ ನಂದ ಉತ್ತಯ್ಯ ಹಾಗೂ ಗ್ರಾಮದ ಯುವಕರ ತಂಡ ಈ ದೇವಾಲಯವನ್ನು ಸ್ಥಾಪಿಸಿತು. ಉಡುಪಿಯ ಪೇಜಾವರ ಮಠದ ಶ್ರೀಗಳು ದೇವಾಲಯವನ್ನು ಉದ್ಘಾಟಿಸಿದರು. ಸುಂದರವಾದ ಗಣಪತಿ ವಿಗ್ರಹದಿಂದಾಗಿ ದೇವಾಲಯ ಇನ್ನಷ್ಟು ಹೆಸರುವಾಸಿಯಾಗಲು ಕಾರಣವಾಗಿದೆ.

ಮಳೆಗಾಗಿ ಭಕ್ತರು ಎಳನೀರಿನ ವಿಶೇಷ ಹರಕೆ ಹೊರುವುದು ಇಲ್ಲಿನ ವಿಶೇಷ. ಒಂದು ವೇಳೆ ಇಷ್ಟಾರ್ಥ ಸಿದ್ಧಿಸಿದಲ್ಲಿ ಗಂಟೆ, ಚಿನ್ನ, ಆಹಾರ ಧಾನ್ಯ ಮುಂತಾದವುಗಳನ್ನು ಸಮರ್ಪಿಸುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಮಾ.24ರಂದು ದೇವಾಲಯದ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಲಿದೆ. ಅಂದು ದೇವರಿಗೆ ಬೆಳ್ಳಿ ಕವಚ ಧರಿಸಿ ವಿಶೇಷ ಪೂಜೆ ಮಾಡಲಾಗುತ್ತದೆ. ಇದರೊಂದಿಗೆ ದೇವರಿಗೆ ಬೆಣ್ಣೆ ಅಭಿಷೇಕ, ಗಣಪತಿ ಹೋಮ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ವೀರಗಾಸೆ, ಕರಗ, ಡೊಳ್ಳು ಕುಣಿತ, ಗೊಂಬೆ ಕುಣಿತ, ಮುಂತಾದ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿಯಿಂದ ಆಯೋಜಿಸಲಾಗುತ್ತದೆ. ವಾರ್ಷಿಕೋತ್ಸವ ದಿನದಂದು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಗಣಪತಿ ಸೇವಾ ಮಿತ್ರ ಮಂಡಳಿ ಕಳೆದ 42 ವರ್ಷಗಳಿಂದ ಶ್ರೀ ಗೌರಿ-ಗಣೇಶೋತ್ಸವ ಆಚರಿಸುತ್ತಿದೆ. ಕೊಡಗಿನ ಪ್ರಖ್ಯಾತ ವಾದ್ಯಗೋಷ್ಠಿಗಳು ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಲಿವೆ. ಬಳಿಕ ಕೂತಂಡ ಚಂಗಪ್ಪ ಅವರ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುತ್ತದೆ. ಕರೋನಾ ನಂತರ ಸರಳವಾಗಿ ಉತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಈ ನಡುವೆ ಗಣಪತಿ ಸೇವಾ ಮಿತ್ರ ಮಂಡಳಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೆರವಿಗೆ ಧಾವಿಸುತ್ತಿದೆ. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ವಿವಾಹ ಹಾಗೂ ಕಷ್ಟದಲ್ಲಿ ಇರುವವರಿಗೆ ಆರ್ಥಿಕ ನೆರವನ್ನೂ ನೀಡಲಾಗುತ್ತದೆ. ದೇವಾಲಯದಲ್ಲಿ ಸಾವಿರಕ್ಕೂ ಹೆಚ್ಚು ನಿಶ್ಚಿತಾರ್ಥ, ವಿವಾಹ ನಡೆದಿವೆ. ವಿವಾಹವಾದವರಿಗೆ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ನೀಡಲಾಗುತ್ತದೆ. ದೇವಾಲಯ ಪಕ್ಕದ ಮಳಿಗೆಯನ್ನು ಧರ್ಮಸ್ಥಳ ಸಂಘಕ್ಕೆ ಕಾರ್ಯ ನಿರ್ವಹಣೆಗೆಂದು ಉಚಿತವಾಗಿ ನೀಡಲಾಗಿದೆ.

ಸರ್ವ ಧರ್ಮೀಯರು ಭಾಗಿ: ಹಿಂದು, ಮುಸ್ಲಿಂ, ಕ್ರಿಶ್ಚಿಯನರು, ಕನ್ನಡ, ಕೊಡವ, ಮಲೆಯಾಳಿ, ತಮಿಳು ಹಾಗೂ ಇತರ ಭಾಷಿಕರು ಗೌರಿ- ಗಣೇಶ ಉತ್ಸವದಲ್ಲಿ ಮುಕ್ತವಾಗಿ ಪಾಲ್ಗೊಳ್ಳುತ್ತಿದ್ದು, ಸೌಹಾರ್ದತೆಗೆ ಹೆಸರುವಾಗಿದೆ. ಗೌರಿ-ಗಣೇಶೋತ್ಸವ ದಿನದಂದು ಬೆಳಗ್ಗೆಯಿಂದ ದಿನ ಪೂರ್ತಿ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಐವತ್ತು ಜನ ಬಲದ ಆಡಳಿತ ಮಂಡಳಿ ಇದ್ದು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದಿಗೆ ಗೌರಿ-ಗಣೇಶೋತ್ಸವ, ದೀಪಾವಳಿ, ಶಿವರಾತ್ರಿ ಕಾರ್ತಿಕ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ತಲುಪುವ ಮಾರ್ಗ: ಇಷ್ಟಾರ್ಥ ಸಿದ್ಧಿ ಗಣಪನ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಭಕ್ತರು ಬರುತ್ತಾರೆ. ಮಡಿಕೇರಿಯಿಂದ ಸಿದ್ದಾಪುರ ಮಾರ್ಗವಾಗಿ ಬರುವವರಿಗೆ 41 ಕಿಮೀ ಕ್ರಮಿಸಿದರೆ ಪಾಲಿಬೆಟ್ಟ ಗಣಪತಿ ದೇವಾಲಯ ಸಿಗಲಿದೆ. ಇನ್ನು ವಿರಾಜಪೇಟೆಯಿಂದ ಬರುವರು ಅಮ್ಮತ್ತಿ ಮಾರ್ಗವಾಗಿ 18 ಕಿಮೀ ಕ್ರಮಿಸಿದರೆ ದೇವಾಲಯ ಸಿಗಲಿದೆ. ಗೋಣಿಕೊಪ್ಪದಿಂದ ಬಂದರೆ 10 ಕಿಮೀ ಕ್ರಮಿಸಬೇಕು. ಈ ಜಾಗವನ್ನು ಪಾಲಿಬೆಟ್ಟ ಗಣಪತಿ ಸರ್ಕಲ್ ಎಂದೇ ಕರೆಯಲಾಗುತ್ತದೆ.

42 ವರ್ಷದಿಂದ ಅರ್ಚಕನಾಗಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ಪ್ರತಿದಿನ ನೂರಾರು ಭಕ್ತರು ಬಂದು ಗಣಪತಿಯ ದರ್ಶನ ಪಡೆಯುತ್ತಾರೆ. ಎಲ್ಲ ಧರ್ಮದವರು ಹರಕೆ ಹೊತ್ತು, ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ಭಕ್ತಿಂದ ಬೇಡಿದರೆ ದೇವರು ಎಲ್ಲವನ್ನೂ ಕರುಣಿಸುತ್ತಾನೆ.

ಜಿ.ವಿ.ರಾಧಾಕೃಷ್ಣನ್ ಪ್ರಧಾನ ಅರ್ಚಕ ಪಾಲಿಬೆಟ್ಟ ಶ್ರೀ ಗಣಪತಿ ದೇವಾಲಯ

ಕೊಡಗಿನ ವಿವಿಧ ಭಾಗಗಳಿಂದ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ಹರಕೆ ಅರ್ಪಿಸುತ್ತಾರೆ. ಮಾನವೀಯತೆ ದೃಷ್ಟಿಯಿಂದ ಆಡಳಿತ ಮಂಡಳಿ ಬಡವರ್ಗದವರಿಗೆ ಉಚಿತ ವಿವಾಹ ಹಾಗೂ ಆರ್ಥಿಕ ನೆರವು ನೀಡುತ್ತಿದೆ.

ಕುಟ್ಟಂಡ ಅಜಿತ್ ಕರುಂಬಯ್ಯ ಅಧ್ಯಕ್ಷ ಗಣಪತಿ ದೇವಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net